ಮನೆ ಸುದ್ದಿ ಜಾಲ ವಿಜೃಂಭಣೆಯಿಂದ ನಡೆದ ನಂಜನಗೂಡು ದೊಡ್ಡಜಾತ್ರೆ

ವಿಜೃಂಭಣೆಯಿಂದ ನಡೆದ ನಂಜನಗೂಡು ದೊಡ್ಡಜಾತ್ರೆ

0

ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಶ್ರೀಕಂಠೇಶ್ವರಸ್ವಾಮಿಯ ವೈಭವಯುತ ಪಂಚಮಹಾರಥೋತ್ಸವವು ಇಂದು ಮುಂಜಾನೆ ಶುಭ ಮೀನ ಲಗ್ನದಲ್ಲಿ ೫.೦೦ ರಿಂದ ೫.೪೦ ರ ಸಮಯದಲ್ಲಿ ಶ್ರೀಕಂಠೇಶ್ವರ ಸ್ವಾಮಿಯವರ ಪಂಚಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.


ಈ ನಾಡಿನಲ್ಲಿ ಪಂಚ ರಥಗಳನ್ನು ಎಳೆಯುವ ಏಕೈಕ ಕ್ಷೇತ್ರವೆಂದು ಪ್ರಸಿದ್ಧಿಯಾಗಿರುವ ಗಣಪತಿ, ಪಾರ್ವತಿ ಸಮೇತ ಶ್ರೀಕಂಠೇಶ್ವರ, ಚಂಡೀಕೇಶ್ವರಸ್ವಾಮಿ, ಸುಬ್ರಹ್ಮಣ್ಯ, ಕೊನೆಯದಾಗಿ ಪಾರ್ವತಿ ದೇವಿಯವರ ರಥಗಳು ರಥ ಬೀದಿಯಲ್ಲಿ ಸಾಗಿ ಸರಿಯಾಗಿ ಸರಿಸುಮಾರು ೮.೩೦ ಗಂಟೆಗೆ ಸ್ವಸ್ಥಾನಕ್ಕೆ ಆಗಮಿಸಿದವು. ಇಂದು ಬೆಳಿಗ್ಗೆ ೫.೦೦ ಕ್ಕೆ ದೇವಸ್ಥಾನದ ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ರವರ ಮಾರ್ಗದರ್ಶನದಲ್ಲಿ ಪಾರುಪತ್ತೆಗಾರ ಶಂಕರ್ ದೀಕ್ಷಿತ್, ನೀಲಕಂಠ ದೀಕ್ಷಿತ್ ಸೇರಿದಂತೆ ಅರ್ಚಕರ ತಂಡ ರಥೋತ್ಸವದ ಧಾರ್ಮಿಧ ವಿಧಿವಿದಾಗಳನ್ನು ನೆರವೇರಿಸಿದ ನಂತರ ರಥಗಳ ಮೇಲೆ ಪ್ರತಿಷ್ಟಾಪಿಸುವ ಉತ್ಸವ ಮೂರ್ತಿಗಳಿಗೆ ಬಿಲ್ವ ಪತ್ರಗಳಿಂದ ಪೂಜೆ ಸಲ್ಲಿಸಿದ ನಂತರ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ.ಜಿ, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ತಹಸೀಲ್ದಾರ್ ಶಿವಕುಮಾರ ಕಾಸನೂರು, ಎಎಸ್ಪಿ ಮಲ್ಲಿಕ್, ಡಿವೈಎಸ್ಪಿ ರಘು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ದೇವಸ್ಥಾನದ ಕಾರ್ಯನಿರ್ವಹಕಾಧಿಕಾರಿ ಜಗದೀಶ್, ಎಇಒ ಸತೀಶ್, ಸೂಪರಿಡೆಂಟ್ ಸಿದ್ದರಾಜು, ಸೇರಿದಂತೆ ಈ ಸಂದರ್ಭದಲ್ಲಿ ಹಲವಾರು ಅಧಿಕಾರಿಗಳು ವಿವಿಧ ಪಕ್ಷದ ಮುಖಂಡರುಗಳು ರಥೋತ್ಸವಕ್ಕೆ ಎಲ್ಲಾ ರೀತಿಯ ಅನುಕೂಲ ಕಲ್ಪಿಸಿಕೊಟ್ಟರು.
ಶ್ರೀ ಗೌತಮ ಮಹಾರಥವು ೮೦ ಅಡಿ ಎತ್ತರವಿದ್ದು ೧೧೦ ಟನ್‌ಗಳಷ್ಟು ತೂಕವಿದೆ. ಇದು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ. ಕೆಲವು ವರ್ಷಗಳ ಹಿಂದೆ ರಥವನ್ನು ದೇವಾಲಯದ ರಾಜಗೋಪುರದೆತ್ತರಕ್ಕೆ ಕಟ್ಟಲಾಗುತ್ತಿತ್ತು. ಕಾಲಾನಂತರ ಇದು ೮೦ ಅಡಿಗೆ ಸೀಮಿತಗೊಂಡಿದೆ. ಇದನ್ನು ರಥೋತ್ಸವ ದಿನದಂದು ವಿಶೇಷವಾಗಿ ಸಿಂಗರಿಸಿದ್ದು, ರಥದಲ್ಲಿ ವಜ್ರ ವೈಡೂರ್ಯ ಖಚಿತ ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ನಂತರ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.

ನಿಗದಿತ ಸಮಯದಲ್ಲಿ ದೇಗುಲದ ಅರ್ಚಕ ವೃಂದ, ಧಾರ್ಮಿಕ ವಿಧಿ-ವಿಧಾನ, ಪೂರೈಸಿದ ನಂತರ ವೇದ ಘೋಷಗಳು ಮೊಳಗಿದ ಬಳಿಕ ಮಹಾಮಂಗಳಾರತಿ ಇಡುಗಾಯಿ ಒಡೆಯಲಾಗುತ್ತದೆ. ನಂತರ ಶಾಸಕ ದರ್ಶನ್ ಧ್ರುವನಾರಾಯಣ್ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಅಮೃತ ಘಳಿಗೆಯನ್ನೇ ಲಕ್ಷಾಂತರ ಭಕ್ತಾದಿಗಳು ಕಾತರದಿಂದ ಕಾದಿದ್ದು, ಪುಳಕಿತಗೊಂಡು ಬಾರೀ ಗಾತ್ರದ ಹಗ್ಗವನ್ನು ಹಿಡಿದು ಜೈ ಶ್ರೀಕಂಠ, ಜೈ ನಂಜುಂಡ ಎಂದು ಘೋಷಣೆಯನ್ನು ಮುಗಿಲು ಮುಟ್ಟುವಂತೆ ಕೂಗುತ್ತಾ ರಥವನ್ನು ಶ್ರದ್ಧಾಭಕ್ತಿಯಿಂದ ಎಳೆಯುತ್ತಾರೆ.

ರಥವು ರಾಜ ಗಾಂಭೀರ್ಯತೆಯಿಂದ ಸಾಗುವುದನ್ನು ನೋಡಿ ನೆರೆದಿದ್ದ ಲಕ್ಷಾಂತರ ಭಕ್ತರು ಭಕ್ತಿ ಪರವಶರಾಗಿ ಜೀವನ ಸಾರ್ಥಕತೆ ಪಡೆಯುತ್ತಾರೆ. ಜಾತ್ರೆಯಲ್ಲಿ ಭಾಗವಹಿಸುವ ನವ ದಂಪತಿಗಳು ಇಷ್ಟಾರ್ಥ ಸಿದ್ದಿಗೆ ರಥಗಳಿಗೆ ಹಣ್ಣು ದವನ ಎಸೆದು ದೇವರನ್ನು ಸ್ಮರಿಸಿಕೊಳ್ಳುತ್ತಾರೆ. ನಂತರ ಏ.೧೧ ರ ಶುಕ್ರವಾರ ಸಂಜೆ ೭.೦೦ ಗಂಟೆಗೆ ಕಪಿಲಾ ನದಿಯಲ್ಲಿ ತೇಲುವ ದೇವಾಲಯದಲ್ಲಿ ತೆಪ್ಪೋತ್ಸವ ನೆರವೇರಲಿದೆ.

ನಾಡಿನಾದ್ಯಂತ ಪಂಚರಥೋತ್ಸವವನ್ನು ನೋಡಲು ಬಂದಿದ್ದ ಭಕ್ತಾಧಿಗಳಿಗೆ ದೇವಸ್ಥಾನದ ವತಿಯಿಂದ ಪ್ರಸಾದದ ವ್ಯವಸ್ಥೆಯನ್ನು ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ಶ್ರೀ ವಿನಾಯಕ ಮಿತ್ರ ಬಳಗದ ಮುಖ್ಯಸ್ಥ ಬಾಲಸುಬ್ರಮಣ್ಯ, ಮೊಬೈಲ್ ವರ್ಲ್ಡ್‌ನ ಬಸವಣ್ಣ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಬೆಂಗಳೂರಿನ ರಾಜರಾಜೇಶ್ವರಿ ನಗರದ ಖ್ಯಾತ ಸಿವಿಲ್ ಇಂಜಿನಿಯರ್ ಬಿ.ಎಸ್.ಸೋಮಶೇಖರ್ ಮತ್ತು ಕುಟುಂಬ ವರ್ಗದವರು ಅನ್ನಸಂತರ್ಪಣೆ, ಅರವಟ್ಟಿಗೆ ಪಾನಕ, ಮಜ್ಜಿಗೆಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗಿದ್ದು ಭಕ್ತಾಧಿಗಳು ಪ್ರಸಾದವನ್ನು ಸ್ವೀಕರಿಸಿ ದಣಿವು ನೀಗಿಸಿಕೊಂಡರು.

ರಥೋತ್ಸವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಂದನ್‌ಗೌಡ, ತಾಲ್ಲೂಕು ಅಧ್ಯಕ್ಷ ವಿಜಯ್‌ಕುಮಾರ್, ನಗರಸಭಾ ಸದಸ್ಯರುಗಳು, ಮುಖಂಡರುಗಳಾದ ಮಾದಪ್ಪ, ರಾಜೇಶ್, ಸೇರಿದಂತೆ ವಿವಿಧ ಪಕ್ಷದ ಮುಖಂಡರುಗಳು ಭಾಗಿಯಾಗಿದ್ದರು.

ಇದೇ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಮಾತನಾಡಿ, ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನನಗೆ ಸುಪ್ರಸಿದ್ದ ದೊಡ್ಡಜಾತ್ರಾ ಪಂಚರಥೋತ್ಸವ ನಡೆಯುತ್ತಿರುವ ದೇಶದ ಏಕೈಕ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ನಾನು ಶಾಸಕನಾಗಿರುವುದು ನನಗೆ ಖುಷಿ ತಂದಿದೆ. ಈ ಕ್ಷೇತ್ರದ ಜನ ಶ್ರೀಕಂಠೇಶ್ವರ ಸ್ವಾಮಿಯವರ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ನಾನು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಈ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.