ಮೈಸೂರು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಗೌತಮ ಪಂಚಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು.
ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ನಂಜನಗೂಡು ತಾಲೂಕಾಡಳಿತದ ನೇತೃತ್ವದಲ್ಲಿ ಬೆಳಗ್ಗೆ 6.30ರಿಂದ 6.50ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ರಥೋತ್ಸವ ಜರುಗಿತು. ದೇವಾಲಯದ ಪ್ರಧಾನ ಅರ್ಚಕ ನೀಲಕಂಠ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಗಣಪತಿ, ಶ್ರೀ ಕಂಠೇಶ್ವರ ಸ್ವಾಮಿ, ಪಾರ್ವತಿ ಅಮ್ಮ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ರಥಗಳು ಸಾಗಿದವು. ನಂಜುಂಡೇಶ್ವರ ಉತ್ಸವ ಮೂರ್ತಿ ಸಾಗುತ್ತಿದ್ದಾಗ ಭಕ್ತರ ಜೈಕಾರ ಮುಗಿಲು ಮುಟ್ಟುವಂತಿತ್ತು.
ವಿಶೇಷವಾಗಿ ಅಲಂಕಾರಗೊಂಡಿದ್ದ ನಂಜುಂಡೇಶ್ವರ ದೇವಸ್ಥಾನವನ್ನು ರಾಜ್ಯದ ಮೂಲೆಗಳಿಂದ ಬಂದ ಭಕ್ತರು ಕಣ್ತುಂಬಿಕೊಂಡರು. ರಾತ್ರಿಯಿಂದಲೇ ದೇವಾಲಯದ ಸುತ್ತಮುತ್ತ ಜನಜಂಗುಳಿ ನೆರೆದಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.