ಮನೆ ದೇವಸ್ಥಾನ ನಂಜನಗೂಡು: ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ನಂಜನಗೂಡು: ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

0

ನಂಜನಗೂಡು(Nanjangud): ಸಾವಿರಾರು ಭಕ್ತರ ಸಮ್ಮಖದಲ್ಲಿ ಸಿದ್ದೇಶ್ವರ ಸ್ವಾಮಿ ರಥೋತ್ಸವವು ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ವಿಜೃಂಭಣೆಯಿಂದ ಗುರುವಾರ ಜರುಗಿತು.

ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟದಿಂದಾಗಿ ಭಕ್ತರಿಗೆ ಪ್ರವೇಶ ನೀಡದೆ ಜಾತ್ರೆಯನ್ನು ಸಾಂಕೇತಿಕವಾಗಿ ನಡೆಸಲಾಗಿತ್ತು. ಈ ಬಾರಿ ಭಕ್ತರಿಗೆ ಮುಕ್ತ ಅವಕಾಶ ನೀಡಿದ್ದರಿಂದ ನಿರೀಕ್ಷೆಗೂ ಮೀರಿದ ಭಕ್ತರು ಭಾಗವಹಿದ್ದರಿಂದ ಜಾತ್ರೆ ಕಳೆಗಟ್ಟಿತ್ತು.

ಬೆಳಗಿನ ಜಾವ ಭಕ್ತರು ಬೆಟ್ಟ ಏರಿ ದೇವರ ದರ್ಶನ ಪಡೆದು ಪಂಜಿನ ಸೇವೆ ಸಲ್ಲಿಸಿದರು. ಮಧ್ಯಾಹ್ನ ಬಿಸಿಲನ್ನೂ ಲೆಕ್ಕಿಸದೆ ಉತ್ಸಾಹದಿಂದ ಭಕ್ತರು ಬೆಟ್ಟವನ್ನು ಏರುವ ಮೂಲಕ ಭಕ್ತಿ ಸಮರ್ಪಿಸಿದರು.

ಕಾರ್ಯ ಗ್ರಾಮದ ಗದ್ದುಗೆ ಆವರಣದಲ್ಲಿ ಅಲಂಕರಿಸಿದ ಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ ಅಲಂಕೃತ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಭಕ್ತರು ಜೈಕಾರ ಹಾಕುತ್ತಾ ರಥವನ್ನು ಬೆಟ್ಟದ ತಪ್ಪಲಿಗೆ ಎಳೆದು ತಂದರು.ರಥದಿಂದ ಪಲ್ಲಕ್ಕಿಯನ್ನು ಬೇರ್ಪಡಿಸಿ, ‘ಕಾರ್ಯ ಸಿದ್ದಪ್ಪನಿಗೆ ಉಫೇ ಉಘೇ’ ಎಂಬ ಘೋಷಣೆಯೊಂದಿಗೆ ಹೆಗಲ ಮೇಲೆ ಹೊತ್ತು ಬೆಟ್ಟವನ್ನು ಏರಿದರು.

ಬೆಟ್ಟದ ಮೇಲೆ ಹಾಗೂ ತಪ್ಪಲಿನ ಆಯಕಟ್ಟಿನ ಸ್ಥಳಗಳಲ್ಲಿ ಜಾತ್ರೆಗೆ ಆಗಮಿಸಿದ ಜನರಿಗೆ ಸೇವಾರ್ಥದಾರರು ಅನ್ನಸಂತರ್ಪಣೆ ಏರ್ಪಡಿಸಿದ್ದರು.

ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಡಿವೈಎಸ್ಪಿ ಗೋವಿಂದರಾಜ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಕೂಡ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ಮುಖಂಡ ಕಾ.ಪು.ಸಿದ್ದಲಿಂಗಸ್ವಾಮಿ ಮೊದಲಾದವರು ಇದ್ದರು.

ಹಿಂದಿನ ಲೇಖನಗಣೇಶ ಮತ್ತು ಮಳೆ: ಹಾಸ್ಯ
ಮುಂದಿನ ಲೇಖನಚಿನ್ನದ ಅಂಗಡಿಯಲ್ಲಿ ಕಳ್ಳತನ ಪ್ರಕರಣ: 26 ವರ್ಷದ ಬಳಿಕ ಆರೋಪಿ ಖುಲಾಸೆ