ಈ ವಾರ ತೆರೆಕಂಡಿರುವ “ನ್ಯಾನೋ ನಾರಾಯಣಪ್ಪ’ ದಲ್ಲಿ ನಿರ್ದೇಶಕ ಕುಮಾರ್ ಒಂದು ಲವಲವಿಕೆಯ ಕಥೆಯನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ತನ್ನ ಪ್ರೀತಿಯ ಹೆಂಡತಿಯ ಶಸ್ತ್ರಚಿಕಿತ್ಸೆಗೆ 20 ಲಕ್ಷ ಹೊಂದಿಸಿ ಜೀವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಗಂಡನದ್ದು. ಈ 20 ಲಕ್ಷವನ್ನು ಹೇಗೆ ಹೊಂದಿಸುತ್ತಾನೆ ಎನ್ನುವುದನ್ನು ಸಿನಿಮಾದಲ್ಲಿ ನೋಡಬೇಕು. ಹಾಗಂತ ಸಿನಿಮಾ ಕೇವಲ ಈ ವೃದ್ಧ ಜೋಡಿಗಷ್ಟೇ ಸೀಮಿತವಾಗಿದೆ ಎನ್ನುವಂತಿಲ್ಲ. ಅದರಾಚೆ ಹಲವು ಅಂಶಗಳನ್ನು ಹೇಳಲಾಗಿದೆ. ಯುವಜೋಡಿ, ಕಾಸು ಮಾಡಲು ನಿಂತವರ ಹಲವು ದಾರಿಗಳು, ಜೊತೆಗೆ ಅನೇಕ ದಂಧೆ… ಹೀಗೆ ಹಲವು ಅಂಶಗಳು ಸಿನಿಮಾದಲ್ಲಿ ಗಮನ ಸೆಳೆಯುತ್ತವೆ. ನಮ್ಮ ಸುತ್ತಮುತ್ತ ನಡೆಯುವ ಘಟನೆಗಳನ್ನೇ ತಮ್ಮ ಸಿನಿಮಾದ ಕಥಾಹಂದರವನ್ನಾಗಿಸಿದ್ದಾರೆ.
ಚಿತ್ರದಲ್ಲಿ ಭಾವನಾತ್ಮಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಮೂಲಕ ಬಜೆಟ್ ಗಿಂತ ಸಬ್ಜೆಕ್ಟ್ ಮುಖ್ಯ ಎಂಬುದು ಸಿನಿಮಾ ನೋಡಿದಾಗ ಆಗಾಗ ನೆನಪಾಗುತ್ತದೆ.
ಚಿತ್ರದಲ್ಲಿ ನಟಿಸಿರುವ ಕೃಷ್ಣೋಜಿ ರಾವ್, ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಅಕ್ಷತ ಕುಕ್ಕಿ, ಅಪೂರ್ವ ಮೊದಲಾದವರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.














