ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಐರನ್ ಲೆಗ್ ಮ್ಯಾನ್. ಈ ಹಿಂದೆ ಅಮೆರಿಕಾಗೆ ತೆರಳಿ ಟ್ರಂಪ್ ಪರವಾಗಿ ಪ್ರಚಾರ ನಡೆಸಿದ್ದರು. ಅವರನ್ನು ಸೋಲಿಸಿದರು. ಪಶ್ಚಿಮ ಬಂಗಾಳಕ್ಕೆ ಹೋದರು ಅಲ್ಲಿಯೂ ಸೋತರು. ತಮಿಳುನಾಡಿಗೆ ಹೋದರು ಅಲ್ಲೂ ಸೋತರು, ಈ ಮೂಲಕ ತಾವು ರಾಜಕಾರಣದ ಐರನ್ ಲೆಗ್ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ಜಾರಿಗೆ ತಲಾಗುತ್ತಿದೆ. ಈಗ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. 5.70 ಲಕ್ಷ ಜನ ಈ ಸೌಲಭ್ಯ ಪಡೆದಿದ್ದಾರೆ. ಜನ ಶಕ್ತಿ ಯೋಜನೆಯ ಸಂಭ್ರಮಾಚರಣೆ ಮಾಡಿದ್ದಾರೆ ಜನರ ಪರವಾಗಿ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿಯವರು ಗ್ಯಾರಂಟಿಗಳನ್ನು ಈಡೇರಿಸಲು ಆಗುವುದಿಲ್ಲವೆಂದು ಹೇಳುತ್ತಿದ್ದರು. ಆದರೆ ಸರ್ಕಾರ ಸಮಯ ನಿಗದಿ ಮಾಡಿಕೊಂಡು ಜಾರಿಗೆ ತಂದಿದೆ ಎಂದರು.
ಬಿಜೆಪಿ ಡಬಲ್ ಇಂಜಿನ್ ಸರ್ಕಾರವೆಂದು ಹೇಳುತ್ತಿದ್ದರು. ಈಗ ಒಂದು ಇಂಜಿನ್ ನ್ನು ಜನ ಶೆಡ್ ಗೆ ಕಳಿಸಿದ್ದಾರೆ. ಈಗ ಡೆಲ್ಲಿಯಲ್ಲಿ ಒಂದು ಇಂಜಿನ್ ಇದೆ. 2024ರಲ್ಲಿ ಆ ಇಂಜಿನ್ ಅನ್ನು ಜನ ಮನೆಗೆ ಕಳಿಸುವುದು ಗೋಡೆ ಬರಹದಷ್ಟೇ ಸ್ಪಷ್ಟವಾಗಿ ಕಾಣುತ್ತಿದೆ. ಯಾಕೆಂದರೆ ವಚನ ಭ್ರಷ್ಟರು ಯಾರಾದರೂ ಇದ್ದರೆ ಅದು ಬಿಜೆಪಿ, ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಉಗ್ರಪ್ಪ ಟೀಕಿಸಿದರು.
ತಮಿಳುನಾಡಿಗೆ ಹೋಗಿ ಅಮಿತ್ ಶಾ ಅವರು ತಮ್ಮ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ. ಸಭೆ ನಡೆಸಿ ಎರಡು ಬಾರಿ ತಮಿಳುನಾಡಿನವರು ಪ್ರಧಾನಮಂತ್ರಿ ಆಗಬೇಕಿತ್ತು ಎಂದಿದ್ದಾರೆ. ಈ ಬಾರಿ ತಮಿಳುನಾಡಿನವರು ಪ್ರಧಾನಮಂತ್ರಿಯಾಗಲು ಹಚ್ಚಿನ ಸ್ಥಾನ ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ. ಅಂದರೆ ಇವರ ಪ್ರಧಾನಿ ಮೋದಿ ವರ್ಚಸ್ಸು ಏನಾಯ್ತು? ಬಿಜೆಪಿ ಹಸಿ ಸುಳ್ಳುಗಳನ್ನು ಹೇಳಿಕೊಂಡು ಓಡಾಡುತ್ತಿದೆ. ಇವರು ದಕ್ಷಿಣ ಭಾರತದವರನ್ನು ಪ್ರಧಾನಿಯಾಗಲು ಅವಕಾಶ ಮಾಡಿಕೊಡುತ್ತಾರಾ? ಅಂತಹ ಅಡ್ವಾಣಿ ಅವರನ್ನೇ ಮೂಲೆಗುಂಪು ಮಾಡಿದವರು ಇವರು ಎಂದು ಹೇಳಿದರು.
ಭ್ರಷ್ಟಾಚಾರದ ತನಿಖೆ: 40% ತನಿಖೆ ನಡೆಸಿ ಎಂಬ ಕುಮಾರಸ್ವಾಮಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಉಗ್ರಪ್ಪ, ಕಾಂಗ್ರೆಸ್ ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ. ಭ್ರಷ್ಟಾಚಾರ ವಿಚಾರವಾಗಿಯೇ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಹೋರಾಡಿದ್ದರು. ಬಿಜೆಪಿ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸಲಾಗುತ್ತಿದೆ. ಇದು ರಾಜ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ತನಿಖೆ. ಇದರ ಹೊರತಾಗಿ ಯಾವುದೇ ಸೇಡಿನ ರಾಜಕೀಯ ಇಲ್ಲ ಎಂದರು.