ನವದೆಹಲಿ (New Delhi): ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯು (ಬಿಬಿವಿ154) ಸುರಕ್ಷಿತ ಎಂದು ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ವರದಿ ಬಂದಿದೆ.
ಈ ಬಗ್ಗೆ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಡೆಡ್ (ಬಿಬಿಐಎಲ್) ಮಾಹಿತಿ ನೀಡಿದೆ. ಕೋವ್ಯಾಕ್ಸಿನ್ ಕೋವಿಡ್-19 ದೇಶೀಯ ಲಸಿಕೆ ತಯಾರಿಸುತ್ತಿರುವ ಭಾರತ್ ಬಯೋಟೆಕ್, ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಮತ್ತು ಬೂಸ್ಟರ್ ಡೋಸ್‌ಗಳ ಪ್ರಯೋಗವನ್ನು ಪೂರ್ಣಗೊಳಿಸಿದೆ.
ಮೊದಲನೇ ಮತ್ತು ಎರಡನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲೂ ಲಸಿಕೆಯು ಸುರಕ್ಷಿತ ಎಂಬ ವರದಿ ಬಂದಿತ್ತು. ಕಡಿಮೆ ಮತ್ತು ಮಧ್ಯಮ ಆದಾಯ ದೇಶಗಳಿಗಾಗಿ ಮೂಗಿನ ಮೂಲಕ ನೀಡುವ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಮೂರನೇ ಹಂತದ ಪ್ರಾಯೋಗಿಕ ಪ್ರಯೋಗಗಳ ವರದಿಗಳನ್ನು ಅನುಮೋದನೆಗಾಗಿ ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರಗಳಿಗೆ ಸಲ್ಲಿಸಿರುವುದಾಗಿ ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.
ಆರಂಭಿಕ ಎರಡು ಡೋಸ್‌ಗಳ ಸುರಕ್ಷತೆ ಮತ್ತು ಪ್ರತಿರೋಧಕ ಶಕ್ತಿಯ ಬಗ್ಗೆ 3100 ಜನರಲ್ಲಿ ಪರೀಕ್ಷೆ ನಡೆಸಲಾಗಿದೆ. ದೇಶದ 14 ಪ್ರಾಯೋಗಿಕ ಕೇಂದ್ರಗಳಲ್ಲಿ ಟ್ರಯಲ್ಸ್ ನಡೆಸಲಾಗಿದೆ. ದೇಶದಲ್ಲಿ ಅನುಮೋದನೆಯಾಗಿರುವ ವಿವಿಧ ಕೋವಿಡ್-19 ಲಸಿಕೆಗಳನ್ನು ಹಾಕಿಸಿಕೊಂಡಿರುವ 875 ಜನರಲ್ಲಿ ಮೂಗಿನ ಮೂಲಕ ನೀಡುವ ಬೂಸ್ಟರ್ ಡೋಸ್ ಪ್ರಯೋಗ ನಡೆಸಲಾಗಿದೆ.
ದೇಶದಲ್ಲಿ ಪ್ರಸ್ತುತ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಫುಟ್ನಿಕ್-ವಿ ಕೋವಿಡ್-19 ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ.