ಮೈಸೂರು: ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಸೆ.19 ರಿಂದ 24 ರವರೆಗೆ ರಾಷ್ಟ್ರೀಯ ಮಕ್ಕಳ ರಂಗೋತ್ಸವವನ್ನು ನಡೆಸಲಾಗುತ್ತಿದೆ.
ಇಂಡಿಯನ್ ಥಿಯೇಟರ್ ಫೌಂಡೇಶನ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನಲ್ ಥಿಯೇಟರ್, ರಂಗ ನಿರ್ದೇಶಕ ಮತ್ತು ಹೋರಾಟಗಾರ ಪ್ರಸನ್ನ ನೇತೃತ್ವದಲ್ಲಿ ರಾಷ್ಟ್ರೀಯ ಮಕ್ಕಳ ರಂಗೋತ್ಸವವನ್ನು ಆಯೋಜಿಸಲಾಗಿದೆ.
ಆರು ದಿನಗಳ ಉತ್ಸವದಲ್ಲಿ ಮೈಸೂರು, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸುಮಾರು 50 ನಾಟಕಗಳು ಪ್ರದರ್ಶನಗೊಳ್ಳಲಿವೆ. ಸೋಮವಾರ ಹಾರ್ಡ್‌ವಿಕ್ ಪಿಯು ಕಾಲೇಜು ಆವರಣದಲ್ಲಿ ಸರೋದ್ ವಿದ್ವಾಂಸ ಪಂಡಿತ್ ರಾಜೀವ್ ತಾರಾನಾಥ್ ರಂಗೋತ್ಸವ ಉದ್ಘಾಟಿಸಲಿದ್ದಾರೆ.
ರಂಗೋತ್ಸವ ಕಾರ್ಯಕ್ರಮದ ಪೋಸ್ಟರ್ ಪ್ರಸನ್ನ ಅವರು ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಅವರು, ಕನ್ನಡ ರಂಗಭೂಮಿ ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿವೆ. ಇಂದು ಚಿತ್ರಮಂದಿರಗಳು ಮತ್ತು ಧಾರಾವಾಹಿಗಳು ಪ್ರೇಕ್ಷಕರ ಮೆಚ್ಚಿನ ತಾಣಗಳಾಗಿವೆ. ಮನೆಗಳಲ್ಲಿನ ಟಿವಿ ಪರದೆಗಳಿಗಾಗಿ ಹೆಚ್ಚಿನ ಕಾಲ ಕಳೆಯುತ್ತಿರುವ ಪ್ರೇಕ್ಷಕರು ಮುಂದೆ ರಂಗಭೂಮಿ ನಾಟಕಗಳ ವೀಕ್ಷಿಸಲು ಕಲಾಮಂದಿರಗಳಿಗೆ ಬರುತ್ತಿಲ್ಲ, ಇದರಿಂದಾಗಿ ರಂಗಭೂಮಿ ಕಲಾವಿದರು ಬೇರೆಡೆ ಉದ್ಯೋಗ ಹುಡುಕುವಂತಾಗುತ್ತಿದೆ. ಹೀಗಾಗಿಯೇ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನಲ್ ಥಿಯೇಟರ್’ನ್ನು ಆರಂಭಿಸಲಾಯಿತು ಎಂದು ಹೇಳಿದರು.
ಶೈಕ್ಷಣಿಕ ರಂಗಭೂಮಿಯ ಮೂಲಕ ಕಲಾವಿದರ ಸೃಜನಶೀಲತೆಯನ್ನು ಹೆಚ್ಚಿಸಲು, ಅವರ ಕಲ್ಪನೆಯ ಮನಸ್ಸನ್ನು ಬೆಳೆಸಲು ಬಯಸುತ್ತಿದ್ದೇವೆ. ಅಲ್ಲದೆ, ಮಕ್ಕಳು ನಮ್ಮ ಭಾಷೆ, ಸಂಸ್ಕೃತಿ ಮತ್ತು ಶಬ್ದಕೋಶವನ್ನು ರಂಗಭೂಮಿಯ ಮೂಲಕ ಉತ್ತಮವಾಗಿ ಕಲಿಯಲು ಸಹಾಯವಾಗುತ್ತದೆ. ಇಲ್ಲದಿದ್ದರೆ, ಸೆಲ್‌ಫೋನ್ ಮೂಲಕವೇ ಎಲ್ಲವನ್ನೂ ಕಲಿಯುವಂತಾಗಿ ಹೋಗುತ್ತದೆ ಎಂದು ತಿಳಿಸಿದರು.
ಮಕ್ಕಳಿಗಾಗಿ ಹಿರಿಯರು, ಮಕ್ಕಳಿಗಾಗಿ ಮಕ್ಕಳಿಂದ ನಾಟಕಗಳು, ಪುಸ್ತಕ ಮೇಳ, ಶೈಕ್ಷಣಿಕ ರಂಗ ಸಮ್ಮೇಳನ, ಮಕ್ಕಳ ಸಾಹಿತ್ಯದ ವಿಚಾರ ವಿನಿಮಯ, ಭಿತ್ತಿಚಿತ್ರ ಪ್ರದರ್ಶನಗಳು ಉತ್ಸವದ ಭಾಗವಾಗಿರಲಿವೆ ಎಂದು ಮಾಹಿತಿ ನೀಡಿದರು.