ಬೆಂಗಳೂರು(Bengaluru): ಶಿಕ್ಷಣ ಎಂದರೆ ಕೇವಲ ಉದ್ಯೋಗ ಪಡೆಯುವ ಹಾದಿ ಎಂಬಂತೆ ಬ್ರಿಟಿಷರು ಬಿಂಬಿಸಿದ್ದರು. ಆದರೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಇಂತಹ ಚಿಂತನೆಯನ್ನು ಬದಲಿಸಿ ಶಿಕ್ಷಣ ಸುಧಾರಣೆ ಮಾಡುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸಿಎಂಆರ್ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚೆಗೆ ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲಾಗಿದೆ. ಈ ಕಾಲದಲ್ಲಿ ಮುಂದಿನ ಪೀಳಿಗೆಗಾಗಿ ಉತ್ತಮ ಶಿಕ್ಷಣ ನೀಡುವುದು ಮಹತ್ತರ ಹೊಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿಗಳು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಣೆ ಮಾಡುತ್ತಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಹೊಸ ಸುಧಾರಣೆ ತರಲಾಗುತ್ತಿದೆ ಎಂದರು.
ಶಿಕ್ಷಣವನ್ನು ವಿಶಾಲ ದೃಷ್ಟಿಯಿಂದ ನೋಡುವ ಮತ್ತು 21 ನೇ ಶತಮಾನದ ಆಧುನಿಕ ಚಿಂತನೆಗಳೊಂದಿಗೆ ಬೆಸೆಯುವ ಉದ್ದೇಶವನ್ನು ರಾಷ್ಟ್ರೀಯ ಶಿಕ್ಷಣ ನೀತಿಯು ಹೊಂದಿದೆ. ಭಾರತದಲ್ಲಿ ಎಂದಿಗೂ ಪ್ರತಿಭಾವಂತರ ಕೊರತೆ ಉಂಟಾಗಲಿಲ್ಲ. ಆದರೆ ಶಿಕ್ಷಣವನ್ನು ಕೇವಲ ಉದ್ಯೋಗ ಪಡೆಯುವ ದಾರಿ ಎಂಬಂತೆ ಬಿಂಬಿಸಲಾಗಿದೆ. ಬ್ರಿಟಿಷರ ಆಡಳಿತದಲ್ಲಿ ಅವರ ಅಗತ್ಯಕ್ಕೆ ಅನುಗುಣವಾಗಿ ಜನರಿಗೆ ಶಿಕ್ಷಣ ನೀಡಲು ಆರಂಭಿಸಲಾಯಿತು. ಸ್ವಾತಂತ್ರ್ಯದ ನಂತರವೂ ಈ ಶಿಕ್ಷಣ ವ್ಯವಸ್ಥೆ ಹೆಚ್ಚಿನ ಬದಲಾವಣೆ ಕಾಣಲಿಲ್ಲ. ಭಾರತೀಯ ಶಿಕ್ಷಣ ವ್ಯವಸ್ಥೆಯ ಮಹತ್ವವನ್ನು ಅರಿಯುವ ಕೆಲಸವನ್ನೂ ಯಾರೂ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀಯ ಚಿಂತನೆ, ಪರಂಪರೆಯ ಬಗ್ಗೆ ಶಿಕ್ಷಣದಲ್ಲಿ ಚರ್ಚಿಸುವ ಮಹತ್ವವನ್ನು ಬ್ರಿಟಿಷರು ಮನಗಾಣಲಿಲ್ಲ. ಅವರು ಹೇರಿದ ಶಿಕ್ಷಣದಿಂದಾಗಿ ನಮ್ಮ ಪರಂಪರೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಜ್ಞಾನ ಹಾಗೂ ಶಿಕ್ಷಣ ಬಹುರೂಪವನ್ನು ಹೊಂದಿದೆ. ವ್ಯಕ್ತಿತ್ವವನ್ನು ರೂಪಿಸುವುದೇ ಶಿಕ್ಷಣ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು ಎಂದರು.
ದೇಶದ ಯುವಜನರು ಕೌಶಲ್ಯ ತರಬೇತಿ ಪಡೆದು, ಈಗಿನ ಕಾಲಕ್ಕೆ ಅನುಗುಣವಾಗಿ ತಯಾರಾಗುವಂತೆ ಮಾಡುವುದು ಹೊಸ ಶಿಕ್ಷಣ ನೀತಿಯ ಗುರಿಯಾಗಿದೆ. ಇದಕ್ಕಾಗಿ ಶಿಕ್ಷಣದ ಮೂಲಸೌಕರ್ಯವನ್ನು ಹೆಚ್ಚಿಸಲಾಗುತ್ತಿದೆ. 2014 ರಿಂದ ಹೊಸ ಮೆಡಿಕಲ್ ಕಾಲೇಜುಗಳ ನಿರ್ಮಾಣದ ಪ್ರಮಾಣ 55% ಹೆಚ್ಚಾಗಿದೆ ಎಂದರು.
ಇತ್ತೀಚೆಗೆ ಕನ್ನಡದ ಜನಪ್ರಿಯ ಚಿತ್ರ ಚಾರ್ಲಿ, ನಾಯಿ ಹಾಗೂ ಮಾನವನ ಸೂಕ್ಷ್ಮ ಬಾಂಧವ್ಯವನ್ನು ಸಮರ್ಥವಾಗಿ ತೋರಿಸಿತು. ಸಾಕುಪ್ರಾಣಿಗಳ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ ಅನುಭವ ನನಗೂ ಇದೆ. ಸಾಕುಪ್ರಾಣಿಗಳ ಜೊತೆಗೆ ಕಾಲ ಕಳೆಯುವಾಗ ಮನಸ್ಸು ಪ್ರಶಾಂತವಾಗಿರುತ್ತದೆ. ಜೆಕ್ ಲೇಖಕರಾದ ಮಿಲನ್ ಕುಂದೇರ ಅವರು ಹೇಳಿರುವಂತೆ, ನಾಯಿಗಳು ನಮ್ಮ ಸ್ವರ್ಗಕ್ಕೆ ಸೇತುವೆಯಾಗಿದೆ. ಅವುಗಳು ಯಾವುದೇ ಅಸೂಯೆ, ದ್ವೇಷ ಹೊಂದಿರುವುದಿಲ್ಲ ಎಂದರು.
ನಾಯಿಗಳಿಗೆ ಆಶ್ರಯ ನೀಡುವ ಸಿಎಂಆರ್ ಸಂಸ್ಥೆಯ ಈ ಕಾರ್ಯ ಯಶಸ್ವಿಯಾಗಿದೆ. ಇದಕ್ಕಾಗಿ ಎಲ್ಲರಿಗೂ ಶುಭ ಕೋರುತ್ತೇನೆ. ಈಗಿನ ಕಾಲದಲ್ಲಿ ಪರಿಸರ ಮಾಲಿನ್ಯದಿಂದಾಗಿ ಅನೇಕ ಜೀವಿಗಳಿಗೆ ತೊಂದರೆಯಾಗಿದೆ. ಕೆಲ ಜೀವಿಗಳು ಅಳಿವಿನಂಚಿಗೆ ಬಂದಿವೆ. ಭೂಮಿಯು ಮಾನವನ ಅವಶ್ಯಕತೆಗೆ ಇರುವುದೇ ಹೊರತು ದುರಾಸೆಗಲ್ಲ. ಬೇರೆ ಜೀವಿಗಳು ಕೂಡ ಈ ಭೂಮಿಯಲ್ಲಿದೆ ಹಾಗೂ ಮಾನವನಂತೆಯೇ ಅವುಗಳಿಗೂ ಬದುಕುವ ಹಕ್ಕು ಇದೆ ಎಂಬುದನ್ನು ಮರೆತೇಬಿಟ್ಟಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಿಎಂಆರ್ ಸಂಸ್ಥೆಯನ್ನು ಶ್ಲಾಘಿಸುತ್ತೇನೆ ಎಂದರು.
ಸಿಎಂಆರ್ ಶಿಕ್ಷಣ ಸಂಸ್ಥೆಯು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಸೇವೆ ನೀಡುತ್ತಿರುವುದು ಶ್ಲಾಘನೀಯ. ಸಂಸ್ಥೆಯ ಲೋಗೋ ಕೂಡ ಉನ್ನತ ಮೌಲ್ಯಗಳನ್ನು ಬಿಂಬಿಸುತ್ತದೆ. ಇದೇ ರೀತಿ ಎಲ್ಲಾ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸಲಿ ಎಂದರು.
ಸೋಲಾರ್ ವಿದ್ಯುತ್ ಬಳಕೆಗೆ ಸರ್ಕಾರ ಒತ್ತು ನೀಡಿದೆ. ಹೊಸ ಸಂಶೋಧನೆಗಳ ಮೂಲಕ ಸೋಲಾರ್ ಕ್ಷೇತ್ರದಲ್ಲಿ ಬದಲಾವಣೆ ತರಬೇಕಿದ್ದು, ಇದಕ್ಕಾಗಿ ಎಲ್ಲರೂ ಸಹಯೋಗ ನೀಡಬೇಕು ಎಂದರು.
ಮೆಡಿಕಲ್ ಕಾಲೇಜು ಆರಂಭಿಸಿ
ಮುಂದಿನ ದಿನಗಳಲ್ಲಿ ತಾವು ಕೂಡ ಹೊಸ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್, ಸಿಎಂಆರ್ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಕೆ.ಸಿ.ರಾಮಮೂರ್ತಿ ಅವರಿಗೆ ಸಲಹೆ ನೀಡಿದರು.