ನವದೆಹಲಿ : ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್ಐಆರ್ ದಾಖಲಿಸಲಾಗಿದೆ.
ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ಸಂಸದೆ ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಹೊಸ ಎಫ್ಐಆರ್ ದಾಖಲಿಸಿದೆ. ಸೋನಿಯಾ, ರಾಹುಲ್ ಜೊತೆಗೆ ಇತರ 6 ವ್ಯಕ್ತಿಗಳು ಹಾಗೂ ಮೂರು ಕಂಪನಿಗಳನ್ನು ಸಹ ಎಫ್ಐಆರ್ನಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ.
ಎಫ್ಐಆರ್ ಉಲ್ಲೇಖಿಸಿರುವ ಪ್ರಕಾರ, ಕಾಂಗ್ರೆಸ್ಗೆ ಸಂಬಂಧಿಸಿದ ಕಂಪನಿಯಾದ ಎಜೆಎಲ್ (ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್) ಅನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಳ್ಳಲು ಕ್ರಿಮಿನಲ್ ಪಿತೂರಿ ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯದ (ಇಡಿ) ದೂರಿನ ಆಧಾರದ ಮೇಲೆ ಅಕ್ಟೋಬರ್ 3 ರಂದು ಈ ಎಫ್ಐಆರ್ ದಾಖಲಿಸಲಾಗಿದೆ. ಇಡಿ ತನ್ನ ತನಿಖಾ ವರದಿಯನ್ನ ದೆಹಲಿ ಪೊಲೀಸರೊಂದಿಗೆ ಹಂಚಿಕೊಂಡಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತು ಇತರ ಮೂವರು. ಜೊತೆಗೆ ಎಜೆಎಲ್, ಯಂಗ್ ಇಂಡಿಯನ್ ಮತ್ತು ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ (ಎಲ್ಜೆಎಲ್)ಗೆ ಸೇರಿದ ಸುಮಾರು 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನ ಆರೋಪಿಗಳೆಲ್ಲರು ಸೇರಿ ತಮ್ಮ ವಶಕ್ಕೆ ಪಡೆದಿದ್ದರು. ಯಂಗ್ ಇಂಡಿಯನ್ ಸಂಸ್ಥೆಯಲ್ಲಿ ಸೋನಿಯಾ, ರಾಹುಲ್ ಗಾಂಧಿ ಶೇ.76 ರಷ್ಟು ಷೇರು ಹೊಂದಿದ್ದರು. 90 ಕೋಟಿ ರೂ. ಸಾಲಕ್ಕೆ ಬದಲಾಗಿ ಎಲ್ಜೆಎಲ್ನ ಆಸ್ತಿಗಳನ್ನ ಇವರು ಕಬಳಿಸಿದ್ದರು ಎಂದು ಇಡಿ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು.
ಇಡಿ 2021 ರಲ್ಲಿ ತನಿಖೆ ಆರಂಭಿಸಿತ್ತು. ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಜೂನ್ 2014 ರಲ್ಲಿ ನೀಡಿದ ಆದೇಶದ ಆಧಾರದ ಮೇಲೆ ತನಿಖೆ ನಡೆಸಿತ್ತು. ಕಳೆದ ಏಪ್ರಿಲ್ನಲ್ಲಿ ಮೊದಲ ಬಾರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿತ್ತು.














