ಯಾವುದೇ ಪಕ್ಷದವರಾಗಿರಲಿ ರಾಷ್ಟ್ರ ಸೇವೆ ಎಂಬುದು ಪ್ರತಿಯೊಬ್ಬ ಸಂಸದನಿಗೂ ಮೊದಲ ಜವಾಬ್ದಾರಿಯಾಗಿರಬೇಕು, ಬೇರೆಯವರನ್ನು ಟೀಕಿಸುವ ಮುನ್ನ ವಿಷಯಗಳ ಅಧ್ಯಯನ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಂಸದರಿಗೆ ಸಲಹೆ ನೀಡಿದ್ದಾರೆ.
ಐತಿಹಾಸಿಕವಾಗಿ ಮೂರನೇ ಅವಧಿಗೆ ಚುನಾಯಿತರಾದ ನಂತರ ಎನ್ ಡಿಎ ಸಂಸದರನ್ನುದ್ದೇಶಿಸಿ ಮಾಡಿದ ಮೊದಲ ಔಪಚಾರಿಕ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸದರಿಗೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದರು.
ಕಲಿಯಲು ಸಂಸತ್ತಿಗಿಂತ ಉತ್ತಮ ಸ್ಥಳವಿಲ್ಲ, ಮಹಾನ್ ಪ್ರಯಾಣದ ಬಗ್ಗೆ ತಿಳಿಯಲು ಮತ್ತು ಅವರ ಅನುಭವದಿಂದ ಕಲಿಯಲು ಅವರು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬೇಕು ಎಂದು ಮೋದಿ ಹೇಳಿದ್ದಾರೆ ಎನ್ನಲಾಗಿದೆ.
ಸಂಸದರು ದೇಶ ಸೇವೆ ಮಾಡಲು ಇಲ್ಲಿಗೆ ಬಂದಿದ್ದಾರೆ ಮತ್ತು ರಾಷ್ಟ್ರವನ್ನು ಯಾವಾಗಲೂ ಮೊದಲ ಸ್ಥಾನದಲ್ಲಿರಿಸಲು ಎಲ್ಲರಿಗೂ ಸಲಹೆ ನೀಡಿದ್ದಾರೆ. ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಎನ್‌ಡಿಎ ಸಂಸದರಿಗೆ ಸಂಸದೀಯ ನಿಯಮಗಳು ಹಾಗೂ ನಡವಳಿಕೆಯನ್ನು ಅನುಸರಿಸುವಂತೆ, ಸಂಸದರು ನಿಯಮಿತವಾಗಿ ಸಂಸತ್ತಿಗೆ ಹಾಜರಾಗಬೇಕು. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಬೇಕು ಎಂದು ಹೇಳಿದರು.
ಯಾವುದೇ ವಿಷಯದ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುವ ಮೊದಲು ಅದನ್ನು ಅಧ್ಯಯನ ಮಾಡುವಂತೆ ಸೂಚಿಸಿದರು. ಎನ್‌ಡಿಎ ಸಂಸದರು ಸಾರ್ವಜನಿಕವಾಗಿ ಮಾತನಾಡುವುದರಲ್ಲಿ ಏಕರೂಪತೆ ಇರಬೇಕು, ಸಂಸದರು ಕ್ಷೇತ್ರಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಬೆಂಬಲ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಗಿರಿರಾಜ್ ಸಿಂಗ್, ಮಿಲಿಂದ್ ದಿಯೋರಾ, ಕಂಗನಾ ರಾನಾವತ್ ಮತ್ತು ಜಯಂತ್ ಚೌಧರಿ ಸೇರಿದಂತೆ ವಿವಿಧ ಎನ್‌ಡಿಎ ನಾಯಕರು ಸಭೆಗೆ ಆಗಮಿಸಿದ್ದಾರೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಆಡಳಿತ ಪಕ್ಷದ ಸಂಸದರನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಸಂಸದರನ್ನು ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭಾಷಣದ ಹಲವು ಭಾಗಗಳನ್ನು ತೆಗೆದುಹಾಕಲಾಗಿದೆ. ತೆಗೆದುಹಾಕಲಾದ ಭಾಗಗಳಲ್ಲಿ ಹಿಂದೂಗಳು ಮತ್ತು ಪಿಎಂ ನರೇಂದ್ರ ಮೋದಿ-ಬಿಜೆಪಿ-ಆರ್‌ಎಸ್‌ಎಸ್ ಬಗ್ಗೆ ಮಾತನಾಡಿ ರಾಹುಲ್ ವಿವಾದ ಸೃಷ್ಟಿಸಿದ್ದರು.