ಯಳಂದೂರಿನಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಶ್ರೀರಂಗನಾಥನ ನೆಲೆವೀಡು ಬಿಳಿಗಿರಿ ರಂಗನ ಬೆಟ್ಟ, ಪುರಾಣ ಪ್ರಸಿದ್ಧ ಸ್ಥಳ.
ಈ ಕ್ಷೇತ್ರಕ್ಕೆ ಬಿಳಿಗಿರಿ ಎಂದು ಹೆಸರು ಬರಲು ಬೆಟ್ಟದಲ್ಲಿ ಬಿಳಿಯ ಬಣ್ಣದ ಶಿಲೆಗಳಿರುವುದೇ ಕಾರಣ. ಈ ಬೆಟ್ಟವನ್ನು ಜನಪದರು ಬಿಳಿಕಲ್ಲು ಬೆಟ್ಟ ಎಂದರೆ, ಪಂಡಿತರು ಶ್ವೇತಾದ್ರಿ ಎಂದೂ ಕರೆದಿದ್ದಾರೆ. ಬ್ರಹ್ಮಾಂಡ ಪುರಾಣದಲ್ಲಿ ಈ ಬೆಟ್ಟವನ್ನು ದಕ್ಷಿಣ ತಿರುಪತಿ ಎಂದು ಉಲ್ಲೇಖಿಸಲಾಗಿದೆ. 5,091 ಅಡಿ ಎತ್ತರದ ನಿಸರ್ಗರಮಣೀಯವಾದ ಬೆಟ್ಟದಲ್ಲಿ ನವರಂಗ, ಮುಖಮಂಟಪದಿಂದ ಕೂಡಿದ ಬಿಳಿಗಿರಿರಂಗನ ಪುರಾತನ ದ್ರಾವಿಡಶೈಲಿಯ ದೇವಾಲಯವಿದೆ.
ಇಲ್ಲಿ 5 ಅಡಿ ಎತ್ತರ ಇರುವ ಮೂಲ ದೇವರನ್ನು ಬ್ರಹ್ಮರ್ಷಿಗಳಾದ ವಸಿಷ್ಠರೇ ಪ್ರತಿಷ್ಠಾಪಿಸಿದರು ಎಂದು ಸ್ಥಳಪುರಾಣ ಸಾರುತ್ತದೆ. ನವರಂಗದ ಬಲಭಾಗದಲ್ಲಿರುವ ಮೂರು ಗೂಡುಗಳಲ್ಲಿ ಲೋಹದಿಂದ ನಿರ್ಮಿಸಿದ ರಂಗನಾಥ, ಹನುಮಂತ ಮಣವಾಳ ಮಹಾಮುನಿಯ ಮೂರ್ತಿಗಳಿವೆ. ಪಕ್ಕದಲ್ಲೇ ಅಲಮೇಲು ಮಂಗಮ್ಮ, ದೇವಿ ಸನ್ನಿಧಿ ಇದೆ. ನವರಂಗದ ಎಡಭಾಗದಲ್ಲಿರುವ ಗೂಡುಗಳಲ್ಲಿ ರಾಮಾನುಜಾಚಾರ್ಯ, ನಮ್ಮಾಳ್ವಾರ್ ಮೂರ್ತಿಗಳಿವೆ. ವೇದಾಂತಾಚಾರ್ಯರ ಮೂರ್ತಿಯನ್ನೂ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಪಿತೃವಾಕ್ಯ ಪರಿಪಾಲನೆಗಾಗಿ ತಾಯಿ ರೇಣುಕಾಮಾತೆಯ ಶಿರವನ್ನು ತನ್ನ ಪರಶುವಿನಿಂದ ಚಂಡಾಡಿದ ಪರಶುರಾಮ ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಗಿರಿಯಲ್ಲಿ ತಪವನ್ನಾಚರಿಸಿ ವಿರಜಾ ನದಿಯ ಜಲದಿಂದ ಭಗವಂತನ ಪಾದತೊಳೆದನೆಂದೂ ಸ್ಥಳಪುರಾಣ ಹೇಳುತ್ತದೆ.
ಹೀಗಾಗೇ ದೇವಾಲಯದಿಂದ 16 ಕಿ.ಮೀ. ದೂರದಲ್ಲಿರುವ ವಿರಜಾ ನದಿಗೆ, ಭಾರ್ಗವಿ ನದಿ ಎಂದು ಹೆಸರು ಬಂದಿದೆ. ಬೆಟ್ಟದ ಮೇಲೆ ಗಂಗಾಧರೇಶ್ವರನ ದೇಗುಲವೂ ಇದೆ. ಅಸುರರನ್ನು ತನ್ನ ಕೆಂಗಣ್ಣಿನಿಂದ ಭಸ್ಮಮಾಡಿದ ಶಿವ ಇಲ್ಲಿ ಗಂಗಾಧರನಾಗಿ ನೆಲೆ ನಿಂತ ಎನ್ನುತ್ತದೆ ಐತಿಹ್ಯ. ಶಿವ ಹಾಗೂ ನಾರಾಯಣರು ನೆಲೆಸಿಹ ಈ ತಾಣ ಹರಿಹರ ಕ್ಷೇತ್ರವೆಂದೂ ಪ್ರಖ್ಯಾತವಾಗಿದೆ.
ಪ್ರವಾಸಿತಾಣ : ಬಿಳಿಗಿರಿರಂಗನ ಬೆಟ್ಟ ಸುಂದರ ಪ್ರವಾಸಿತಾಣವೂ ಹೌದು. ಇದು ವನ್ಯಮೃಗಗಳ ಬೀಡು, ಶ್ರೀರಂಗನಾಥನ ನೆಲೆವೀಡು
ಮೈಸೂರಿನಿಂದ 120 ಕಿ.ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿ.ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ , ಸಮುದ್ರ ಮಟ್ಟದಿಂದ 1552 ಮೀಟರ್ ಎತ್ತರದಲ್ಲಿದೆ.
16 ಕಿ.ಮೀ.ನಷ್ಟು ಉದ್ದದವರೆಗೆ ಹಬ್ಬಿರುವ ಬಿಳಿಗಿರಿರಂಗನ ಬೆಟ್ಟ ಶ್ರೇಣಿಯ ನೋಟವೇ ಸುಂದರ. ಇಲ್ಲಿ ಇಡೀ ಭೂಭಾಗವೇ ನೈಸರ್ಗಿಕ ಕಾನನಗಳಿಂದ ಕೂಡಿದ್ದು ಆನೆ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ತೋಳ, ನರಿ ಮೊದಲಾದ ನೂರಾರು ಬಗೆಯ ವನ್ಯಮೃಗಗಳಿಗೆ ಆಶ್ರಯತಾಣವಾಗಿದೆ.
540 ಚದರ ಕಿ.ಮೀ.ನಷ್ಟಿರುವ ದಟ್ಟಡವಿ ಹುಲ್ಲು, ಕುರುಚಲುಗಿಡ, ಪೊದೆ ಹಾಗೂ ಬೀಟೆ, ಹೊನ್ನೆ, ಮತ್ತಿ, ತೇಗ, ಶ್ರೀಗಂಧವೇ ಮೊದಲಾದ ಎತ್ತರದ ಮರಗಳಿಂದ ಕೂಡಿದೆ. ನಿರ್ಮಲವಾಗಿ ಹರಿವ ಕಾವೇರಿ ನದಿ ಮೃಗಪಕ್ಷಿಗಳಿಗಷ್ಟೇ ಅಲ್ಲ ಬೆಟ್ಟದ ಮೇಲಿರುವ ಊರಿನ ಜನರಿಗೂ ಜಲಾಶ್ರಯವಾಗಿದೆ.
ರಮ್ಯತಾಣ: ಈ ಊರಿನಿಂದ 19 ಕಿ.ಮೀ. ದೂರದಲ್ಲಿ ಶಿವನಸಮುದ್ರದ ಗಂಗರಾಜ ಕಂಚು ಕೋಟೆ ನಿರ್ಮಿಸಿದ್ದನೆನ್ನುತ್ತದೆ ಇತಿಹಾಸ. ಈಗಲೂ ಕೋಟೆಯ ಅವಶೇಷಗಳು ಇದಕ್ಕೆ ಮೂಕಸಾಕ್ಷಿಯಾಗಿ ನಿಂತಿವೆ. ಇಲ್ಲಿನ ಬಿಳಿಕಲ್ಲು ತಿರು ವೆಂಕಟನಾಥನಿಗೆ ಹದಿನಾಡಿನ ಮುದ್ದರಾಜ ೧೬೬೭ರಲ್ಲಿ ದತ್ತಿ ಬಿಟ್ಟನೆಂದು ತಾಮ್ರಶಾಸನ ಸಾರುತ್ತದೆ. ದಿವಾನ್ ಪೂರ್ಣಯ್ಯನವರು ದೇವಾಲಯದ ಸೇವೆಗಾಗಿ ಎರಡು ಗ್ರಾಮಗಳನ್ನೇ ದತ್ತಿಯಾಗಿ ಕೊಟ್ಟಿದ್ದರು.
ಹವಾಮಾನ : ಹಸಿರು ಸಿರಿಯ ನಡುವೆ ಮೈದಳೆದು ನಿಂತಿರುವ ಈ ಪ್ರಕೃತಿರಮಣೀಯ ತಾಣದ ಹವಾಮಾನ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಇಲ್ಲಿನ ತಂಪಾದ ಹವೆಯ ಆಹ್ಲಾದವೇ ಬೇರೆ. ಸುಡು ಬೇಸಿಗೆಯಲ್ಲೂ ಬಿಳಿಗಿರಿರಂಗನ ಬೆಟ್ಟ ಹವಾನಿಯಂತ್ರಿತ ಪಟ್ಟಣದಂತೆ ಭಾಸವಾಗುತ್ತದೆ.
ವಾಹನ ಸೌಕರ್ಯ : ಬೆಂಗಳೂರು, ಮೈಸೂರು, ಚಾಮರಾಜನಗರ, ಯಳಂದೂರಿನಿಂದ ನೇರ ಬಸ್ ಸೌಲಭ್ಯ ಇದೆ. ಪ್ರವಾಸಿ ಮಂದಿರ, ಗುಡಿ ಕ್ಯಾಂಪ್ನಲ್ಲಿ ವಾಸ್ತವ್ಯಕ್ಕೆ ಅವಕಾಶವಿದೆ. ಈ ಬೆಟ್ಟದಲ್ಲಿ ಕಾಡಾನೆ, ಕರಡಿಗಳ ಕಾಟವಿದೆ ರಾತ್ರಿಯ ಪ್ರಯಾಣ ಮಾಡದಿರುವುದು ಉತ್ತಮ.
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in