ಹೊಸ ಪ್ರಮೋಶನ್ ಶೈಲಿಯ ಮೂಲಕ ಗಮನ ಸೆಳೆದಿರುವ “ನಾಟೌಟ್’ ಚಿತ್ರ ಇಂದು ತೆರೆಕಾಣುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ಒಂದು ಹೊಸ ಯೋಜನೆಗೆ “ನಾಟ್ ಔಟ್’ ಚಿತ್ರತಂಡ ಕೈ ಹಾಕಿದೆ.
ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ನಿರ್ಮಿಸಿದ್ದು, ಅಂಬರೀಶ್ ಎಂ ನಿರ್ದೇಶನವಿದೆ. ಅಜಯ್ ಪೃಥ್ವಿ ಹಾಗೂ ರಚನಾ ಇಂದರ್ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಾಟ್ ಔಟ್ ಚಿತ್ರ ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್ನ ಚಿತ್ರವಾಗಿದೆ. ನಾಯಕ ನಟ ಪೃಥ್ವಿ ಇಲ್ಲಿ ಅಂಬ್ಯುಲೆನ್ಸ್ ಚಾಲಕನಾಗಿ ನಟಿಸಿದ್ದಾರೆ. “ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಈ ಚಿತ್ರದ ನನ್ನ ಪಾತ್ರವನ್ನು ಎಲ್ಲಾ ಅಂಬ್ಯುಲೆನ್ಸ್ ಚಾಲಕರಿಗೆ ಅರ್ಪಿಸುತ್ತಿದ್ದೇನೆ’ ಎನ್ನುವುದು ಅಜಯ್ ಪೃಥ್ವಿ ಮಾತು.
ಚಿತ್ರದಲ್ಲಿ ರಚನಾ ಇಂದರ್ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಾಕ್ರೋಜ್ ಸುಧಿ, ಅಶ್ವಿನ್ ಹಾಸನ್, ಪ್ರಶಾಂತ್ ಸಿದ್ಧಿ, ಸಲ್ಮಾನ್ ಮುಂತಾದ ಕಲಾವಿದರು ನಟಿಸಿದ್ದಾರೆ.














