ಮನೆ ರಾಜ್ಯ ನಯಾಬ್ ಸಿಂಗ್ ಸೈನಿ ಹರಿಯಾಣದ ನೂತನ ಮುಖ್ಯಮಂತ್ರಿ

ನಯಾಬ್ ಸಿಂಗ್ ಸೈನಿ ಹರಿಯಾಣದ ನೂತನ ಮುಖ್ಯಮಂತ್ರಿ

0

ಚಂಡೀಗಢ: ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕುರುಕ್ಷೇತ್ರ ಸಂಸದ ನಯಾಬ್ ಸಿಂಗ್ ಸೈನಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಅವರ ಸಂಪುಟದ ಸಚಿವರು ಇಂದು ಬೆಳಗ್ಗೆ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ರಾಜೀನಾಮೆ ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಸೈನಿ ಅವರು ನರೇಂಗರ್ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಹರಿಯಾಣ ವಿಧಾನಸಭೆಗೆ ಹಲವು ಬಾರಿ ಆಯ್ಕೆಯಾಗಿದ್ದಾರೆ.

ಖಟ್ಟರ್ ನೇತೃತ್ವದ ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕುತ್ತಿರುವ ತನ್ನ ಮೈತ್ರಿ ಪಾಲುದಾರ ಜನನಾಯಕ ಜನತಾ ಪಕ್ಷವನ್ನು (JJP) ಎದುರಿಸುವ ಬಿಜೆಪಿ ಕ್ರಮ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.

2019 ರ ಹರಿಯಾಣ ವಿಧಾನಸಭೆ ಚುನಾವಣೆಯ ನಂತರ ಜೆಜೆಪಿ ಜೊತೆ ಸೇರಿ ಬಿಜೆಪಿ ಸರ್ಕಾರವನ್ನು ರಚಿಸಿತು, ಬಿಜೆಪಿ 90 ರಲ್ಲಿ 40 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಹುಮತದ 6 ಸ್ಥಾನಗಳ ಕೊರತೆಯನ್ನು ಎದುರಿಸಿತು. ತರುವಾಯ, ಬಿಜೆಪಿಯು 10 ಸ್ಥಾನಗಳನ್ನು ಗೆದ್ದಿದ್ದ ಜನನಾಯಕ ಜನತಾ ಪಕ್ಷದೊಂದಿಗೆ ಸೇರಿ ಮೈತ್ರಿ ಸರ್ಕಾರ ರಚಿಸಿತು.

ಒಪ್ಪಂದದ ಭಾಗವಾಗಿ ಜೆಜೆಪಿಯ ದುಷ್ಯಂತ್ ಚೌತಾಲಾ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡು ಸಿಎಂ ಸ್ಥಾನಕ್ಕೆ ಖಟ್ಟರ್ ಮತ್ತು ಅವರ ಇಡೀ ಸಂಪುಟ ಇಂದು ಮುಂಜಾನೆ ರಾಜೀನಾಮೆ ನೀಡಿದೆ.

ಕೇಂದ್ರ ಸಚಿವ ಅರ್ಜುನ್ ಮುಂಡಾ ಮತ್ತು ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು ಬದಲಾವಣೆಗಳ ಮೇಲ್ವಿಚಾರಣೆಗೆ ರಾಜ್ಯದಲ್ಲಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷವು ಇಂದು ಸಂಜೆ ಸಭೆ ಸೇರಲಿದೆ.

ನೂತನ ಸಿಎಂ ಮತ್ತು ಅವರ ಸಂಪುಟ ಸಚಿವರು ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಒಡೆದ ಜೆಜೆಪಿ ಬಣದ ಸದಸ್ಯರು ಮತ್ತು ಸ್ವತಂತ್ರ ಶಾಸಕರು ಬಿಜೆಪಿ ಜೊತೆ ಸೇರ್ಪಡೆಗೊಳ್ಳಬಹುದು.

ಹಿಂದಿನ ಲೇಖನರಾಜಸ್ಥಾನದಲ್ಲಿ ವಾಯುಪಡೆಯ ತೇಜಸ್​ ಯುದ್ಧ ವಿಮಾನ ಪತನ
ಮುಂದಿನ ಲೇಖನಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ: ಹರೀಶ್ ಗೌಡ