ಮನೆ ರಾಷ್ಟ್ರೀಯ 170 ಕ್ಷೇತ್ರಗಳಲ್ಲಿ ಎನ್‌ಡಿಎಗೆ ಮುನ್ನಡೆ – ಕೆಲ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಯು ಪ್ರಬಲ..!

170 ಕ್ಷೇತ್ರಗಳಲ್ಲಿ ಎನ್‌ಡಿಎಗೆ ಮುನ್ನಡೆ – ಕೆಲ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಯು ಪ್ರಬಲ..!

0

ಪಾಟ್ನಾ : ಬಿಹಾರದಲ್ಲಿ 243 ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಸಮೀಕ್ಷೆಗಳು ಈಗಾಗಲೇ ಎನ್‌ಡಿಎ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ತೋರಿಸಿವೆ.

ಮತ ಎಣಿಕೆಯಲ್ಲಿ ಎನ್‌ಡಿಎ ಬೆಳಗ್ಗೆ 10:20 ಗಂಟೆ ಟ್ರೆಂಡ್‌ ವೇಳೆಗೆ ಮ್ಯಾಜಿಕ್‌ ನಂಬರ್‌ ಗಡಿ ದಾಟಿದ್ದು, 170 ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಸಿಎಂ ನಿತೀಶ್‌ ಕುಮಾರ್‌ ಫಲಿತಾಂಶಕ್ಕೂ ಮುನ್ನವೇ ವಿಜಯ ಘೋಷಿಸಿದ್ದಾರೆ.

ವಿಶೇಷವೆಂದ್ರೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದರೆ, ಕೆಲ ಕ್ಷೇತ್ರಗಳಲ್ಲಿ ಆರ್‌ಜೆಡಿ ಅಭ್ಯರ್ಥಿಗಳು ಪ್ರಬಲವಾಗಿದ್ದು, ಮಹಾಘಟಬಂಧನ್‌ ಅಭ್ಯರ್ಥಿಗಳ ಕಟ್ಟಿಹಾಕುವಲ್ಲಿ ಪ್ರಭಾವ ಬೀರಿದ್ದಾರೆ.

ಬೆಳಗ್ಗೆ 10 ಗಂಟೆ ವೇಳೆಗೆ ಮುಜಾಫರ್‌ಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಂಜನ್ ಕುಮಾರ್ 2,545 ಮತಗಳೊಂದಿಗೆ ಕಾಂಗ್ರೆಸ್‌ನ ವಿಜೇಂದ್ರ ಚೌಧರಿಗಿಂತ 575 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಆರ್‌ಜೆಡಿಯ ತನುಶ್ರೀ ಕುಮಾರಿ ಬರಚಟ್ಟಿ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

ಜೆಡಿಯುನ ಅಮರೇಂದ್ರ ಕುಮಾರ್ ಪಾಂಡೆ ಕುಚಾಯ್‌ಕೋಟ್‌ನಲ್ಲಿ 1,398 ಮತಗಳು, ಸುನಿಲ್ ಕುಮಾರ್ ಭೋರೆ ಕ್ಷೇತ್ರದಲ್ಲಿ 3,000 ಮತಗಳು, ರಾಮಸೇವಕ್ ಸಿಂಗ್ ಹತುವಾ ಕ್ಷೇತ್ರದಲ್ಲಿ 1,369 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬರೌಲಿಯಲ್ಲಿ ಆರ್‌ಜೆಡಿಯ ದಿಲೀಪ್ ಕುಮಾರ್ ಸಿಂಗ್ 200 ಮತಗಳ ಆರಂಭಿಕ ಮುನ್ನಡೆಯಲ್ಲಿದ್ದರೆ, ಜೆಡಿಯುನ ಅನಂತ್ ಸಿಂಗ್ ಮೊಕಾಮಾದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಗೋಹ್‌ ಕ್ಷೇತ್ರದಲ್ಲಿ ಬಿಜೆಪಿಯ ರಣವಿಜಯ್ ಕುಮಾರ್ ಮುನ್ನಡೆಯಲ್ಲಿದ್ದಾರೆ.

ತಾರಾಪುರದಲ್ಲಿ ಮೊದಲ ಸುತ್ತಿನಲ್ಲಿ ಬಿಜೆಪಿಯ ಸಾಮ್ರಾಟ್ ಚೌಧರಿ 40 ಮತಗಳ ಆರಂಭಿಕ ಮುನ್ನಡೆಯಲ್ಲಿದ್ದರೆ. ಮುಂಗೇರ್‌ನಲ್ಲಿ ಬಿಜೆಪಿಯ ಕುಮಾರ್ ಪ್ರಣಯ್ 38 ಮತಗಳ ಮುನ್ನಡೆಯಲ್ಲಿದ್ದಾರೆ. ಜಮಾಲ್‌ಪುರದಲ್ಲಿ ನಚಿಕೇತ ಮಂಡಲ್ 1,500 ಮತಗಳಿಂದ ಮುಂದಿದ್ದಾರೆ.

ಫಲಿತಾಂಶಕ್ಕೆ ಸಂಬಂಧಿಸಿದಂತೆ ಬಿಜೆಪಿ ವಕ್ತಾರ ತುಹಿನ್ ಸಿನ್ಹಾ ಮಾತನಾಡಿ, ಮಹಿಳೆಯರು ಮತ್ತು ಯುವಕರು ಎನ್‌ಡಿಎ ಪರವಾಗಿದ್ದಾರೆ, ನಮ್ಮ ಪರವಾಗಿ ಮತ ಚಲಾಯಿಸಿದ್ದಾರೆ. ಸಮೀಕ್ಷೆಗಳು ಮತ್ತು ಮತ ಎಣಿಕೆ ಟ್ರೆಂಡ್‌ಗಳು ನಮ್ಮ ಪರವಾಗಿವೆ. ಈ ಬಾರಿ ಜನ ಜಂಗಲ್‌ ರಾಜ್‌ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾರೆ.

ಆರ್‌ಜೆಡಿ ನಾಯಕರು ಬೆದರಿಕೆಯೊಡ್ಡುತ್ತಿದ್ದಾರೆ, ಬಿಹಾರವನ್ನ ನೇಪಾಳ ಮತ್ತು ಬಾಂಗ್ಲಾದೇಶದಂತೆಯೇ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಎಂದು ಬೇಸರ ಹೊರಹಾಕಿದ್ದಾರೆ.