ಮನೆ ದೇವಸ್ಥಾನ ಮದ್ದೂರಿನ ಹೊಳೆ ಆಂಜನೇಯ ಸನ್ನಿಧಿ

ಮದ್ದೂರಿನ ಹೊಳೆ ಆಂಜನೇಯ ಸನ್ನಿಧಿ

0

ಹನುಮಂತ, ಹೊಳೆ ಆಂಜನೇಯ, ವ್ಯಾಸರಾಜರು, ಮಧ್ವರಾಜರು, ಹೊಳೆ, ಮದ್ದೂರು. ಆಂಜನೇಯಸಕ್ಕರೆಯ ನಾಡು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಶಿಂಷಾ ನದಿ ದಂಡೆಯ ಮೇಲೆ ಇರುವ ಪವಿತ್ರ ಕ್ಷೇತ್ರವೇ ಹೊಳೆ ಆಂಜನೇಯ ಸನ್ನಿಧಿ. ಹೊಳೆಯ ಪಕ್ಕದಲ್ಲಿರುವ ಈ ಆಂಜನೇಯನಿಗೆ ಸಹಜವಾಗೇ ಹೊಳೆ ಆಂಜನೇಯ ಎಂಬ ಹೆಸರು ಬಂದಿದೆ.

ಈ ದೇವಾಲಯಕ್ಕೆ ಸುದೀರ್ಘ ಇತಿಹಾಸವಿದೆ. ಶ್ರೀ ವ್ಯಾಸರಾಜರು ಇಲ್ಲಿ ಆಂಜನೇಯ ಮೂರ್ತಿಯ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಹೀಗಾಗಿ ಕ್ಷೇತ್ರದ ಪಾವಿತ್ರ್ಯತೆ ಹೆಚ್ಚಿ ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣವಾಗಿದೆ.

ವ್ಯಾಸರಾಜರು ಭಾರತದಾದ್ಯಂತ 732 ಆಂಜನೇಯನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು ಎಂದು ಹೇಳಲಾಗಿದ್ದು, ಆ ಪೈಕಿ ವ್ಯಾಸರಾಜ ಪ್ರತಿಷ್ಠಾಪಿತ ಈ ಆಂಜನೇಯ ಮೂರ್ತಿಯೂ ಒಂದು ಎಂಬ ಫಲಕ ದೇವಾಲಯದ ಮುಂಭಾಗದಲ್ಲಿದೆ. ತ್ರೇತಾಯುಗದಲ್ಲಿ ಆಂಜನೇಯನಾಗಿ, ದ್ವಾಪರದಲ್ಲಿ ಭೀಮನಾಗಿ, ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಪ್ರಾಣದೇವರು ಅವತರಿಸಿದ್ದಾಗಿ ಹೇಳಲಾಗುತ್ತದೆ. ಹೀಗಾಗಿಯೇ ಮಧ್ವಪೀಠದ ಯತಿವರೇಣ್ಯರಾದ ವ್ಯಾಸರಾಜರು ಆಂಜನೇಯನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು ಎನ್ನುತ್ತಾರೆ.

ಹನುಮಂತ, ಹೊಳೆ ಆಂಜನೇಯ, ವ್ಯಾಸರಾಜರು, ಮಧ್ವರಾಜರು, ಹೊಳೆ, ಮದ್ದೂರು. ಆಂಜನೇಯಈ ಆಂಜನೆಯನಿಗೆ ಒಂದೂಕಾಲ ಆಣೆ ಆಂಜನೇಯ ಎಂಬ ಹೆಸರೂ ಇದೆ. ಹಿಂದೆ ನಾಲ್ಕಾಣೆ, ಎಂಟಾಣೆ, 16 ಆಣೆ ಚಲಾವಣೆಯಲ್ಲಿದ್ದ ಕಾಲದಲ್ಲಿ, ಇಲ್ಲಿಗೆ ಬರುತ್ತಿದ್ದ ಭಕ್ತರು ಒಂದೂಕಾಲಾಣೆ ಅಂದೆರ ಒಂದು ರೂಪಾಯಿ 25 ಪೈಸೆ ಹಿಡಿದು ದೇವರಲ್ಲಿ ಹರಕೆ ಕಟ್ಟಿಕೊಂಡು, ಪೂಜೆ ಮಾಡಿಸುತ್ತಿದ್ದರು. ತಮ್ಮ ಅಭಿಷ್ಠ ನೆರವೇರಿದ ಮೇಲೆ ಮತ್ತೆ ಬಂದು ದೇವಾಲಯದಲ್ಲಿ ಪ್ರಾಣದೇವರಿಗೆ ವಿಶೇಷ ಪೂಜೆ ಮಾಡಿಸುತ್ತಿದ್ದರಂತೆ.

ಈಗ ನಾಲ್ಕಾಣೆ, 25 ಎರಡೂ ಚಲಾವಣೆಯಲ್ಲಿಲ್ಲ. ಆದರೂ ಇಲ್ಲಿ ಸಂಪ್ರದಾಯ ಮುಂದುವರಿದಿದೆ. ಇಲ್ಲಿಗೆ ಹರಕೆ ಕಟ್ಟಿಕೊಳ್ಳಲು ಬರುವ ಭಕ್ತರಿಗೆ ದೇವಾಲಯದ ಅರ್ಚಕರೇ 25 ಪೈಸೆ ನಾಣ್ಯ ಕೊಡುತ್ತಾರೆ. ಭಕ್ತರು ಆ 25 ಜೊತೆಗೆ ತಮ್ಮ ಹಣವನ್ನು ಕೈಯಲ್ಲಿಟ್ಟುಕೊಂಡು ಸಂಕಲ್ಪ ಮಾಡಿಸಿ,

ಪ್ರಥಮೋ ಹನುಮನ್ನಾಮ ದ್ವಿತೀಯೋ ಭೀಮ ಏವಚ

ಪೂರ್ಣ ಪ್ರಜ್ಞ ಸ್ತುತೀಯಸ್ತು ಭಗವಾನ್ ಕಾರ್ಯಸಾಧಕಃ.

ಎಂದು ದೇವರನ್ನು ಪ್ರಾರ್ಥಿಸಿ, ಹರಕೆ ಹೊರುತ್ತಾರೆ. ಬಳಿಕ ಅರ್ಚಕರು ಆ ಹಣವನ್ನು ದೇವರ ಪಾದದ ಬಳಿ ಇಡುತ್ತಾರೆ. ಹೀಗೆ ಪೂಜೆ ಮಾಡಿಸುವುದರಿಂದ ಮದುವೆ ಆಗದವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ, ಅನಾರೋಗ್ಯ ಪೀಡಿತರು ಗುಣಮುಖರಾಗುತ್ತಾರೆ.

ಮಕ್ಕಳಿಲ್ಲದವರಿಗೆ ಸಂತಾನ ಫಲ ದೊರಕುತ್ತದೆ, ಕೋರ್ಟ್ ವ್ಯಾಜ್ಯ ಬಗೆಹರಿಯುತ್ತದೆ ಎಂಬ ನಂಬಿಕೆ ಇದೆ.

ಸುಮಾರು 550 ವರ್ಷಗಳಷ್ಟು ಹಳೆಯದಾದ ಪುಟ್ಟ ದೇವಾಲಯವನ್ನು ವಿಜಯ ನಗರದ ಅರಸರ ಕಾಲದಲ್ಲಿ ಅಂದರೆ ಕ್ರಿ.ಶ. 1450-1498ರ ನಡುವೆ ಕಟ್ಟಲಾಗಿದೆ ಎಂದು ತಿಳಿದುಬರುತ್ತದೆ. ಪ್ರವೇಶದಲ್ಲಿ ನಾಲ್ಕು ಕಲ್ಲು ಕಂಬದ ಮಂಟವಿದ್ದು, ಅದರ ಮೇಲೆ ಗೋಪುರವಿದೆ. ಗೋಪುರದ ಗಾರೆಯ ಗೂಡಿನಲ್ಲಿ ಹನುಮದ್ ಸಮೇತ ಶ್ರೀಸೀತಾರಾಮಲಕ್ಷ್ಮಣರ ಗಾರೆಯ ಶಿಲ್ಪವಿದೆ.

ಹನುಮಂತ, ಹೊಳೆ ಆಂಜನೇಯ, ವ್ಯಾಸರಾಜರು, ಮಧ್ವರಾಜರು, ಹೊಳೆ, ಮದ್ದೂರು. ಆಂಜನೇಯಪ್ರಧಾನ ಗರ್ಭಗೃಹದಲ್ಲಿ ಆಂಜನೆಯನ ಮೂರ್ತಿ ಇದೆ. ಈ ಮೂರ್ತಿ ಆಕರ್ಷಕವಾಗಿದೆ. ಆಂಜನೇಯ ಮೂರ್ತಿಯ ಎರಡು ಬೆರಳುಗಳು ಉದ್ದವಿದ್ದು, ಇದು ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತ ಸಂಕೇತಿಸುತ್ತದೆ ಎಂದು ಫಲಕದಲ್ಲಿ ಉಲ್ಲೇಖಿಸಲಾಗಿದೆ.

ಹನುಮ ತನ್ನ ಕೈಯಲ್ಲಿ ಸೌಗಂದಿಕಾ ಪುಷ್ಪ ಹಿಡಿದಿರುವುದು ಭೀಮನ ಅವತಾರವನ್ನು ಪ್ರತಿಪಾದಿಸುತ್ತದೆ. ಬಾಲದ ತುದಿಯಲ್ಲಿ ಗಂಟೆ ಇರುವುದು ವ್ಯಾಸರಾಜರ ಪ್ರತಿಷ್ಠಾಪನೆಯ ಸಂಕೇತವಾಗಿದೆ. ಹನುಮನ ತಲೆಯ ಭಾಗದಲ್ಲಿ ಸೂರ್ಯಚಂದ್ರರಿದ್ದಾರೆ. ಹನುಮನಿಗೆ ಇಲ್ಲಿ ಜುಟ್ಟೂ ಇದೆ. ಈ ಮೂರ್ತಿ ಬೆಳೆಯುತ್ತಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಪ್ರದೀಪ್  ಅವರು ಹೇಳುತ್ತಾರೆ. 10-12 ವರ್ಷದ ಅವಧಿಯಲ್ಲಿ ವಿಗ್ರಹ ಸುಮಾರು ಅರ್ಧ ಇಂಚು ಬೆಳೆದಿದೆಯಂತೆ.  ದೇವಾಲಯದಲ್ಲಿ ಪವಾಡವೂ ನಡೆದಿದೆಯಂತೆ. 2004 ಮತ್ತು 2011ರಲ್ಲಿ ಸಂಭವಿಸಿದ ಚಂದ್ರ ಗ್ರಹಣ ಕಾಲದಲ್ಲಿ ಬಾಗಿಲು ಮುಚ್ಚಿದ ದೇವಾಲಯದ ಒಳಗಿಂದ ಶಂಖ, ಜಾಗಟೆ, ನಗಾರಿ ಬಾರಿಸಿದ ಶಬ್ದ ಮೊಳಗಿತ್ತಂತೆ.

ಇಂಥ ಪವಾಡಗಳ ಕ್ಷೇತ್ರದಲ್ಲಿನ ಈ ಆಂಜನೇಯ ಸ್ವಾಮಿಯ ಮಹಿಮೆ ಅರಿತು ಹಲವು ಯತಿಗಳು, ಮಠಾಧೀಶರು ಇಲ್ಲಿಗೆ ಗಮಿಸಿ, ಸ್ವಯಂ ಪ್ರಾಣದೇವರಿಗೆ ಪೂಜೆ ನೆರವೇರಿಸಿರುವುದು ಕ್ಷೇತ್ರದ ಘನತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ದೇವಾಲಯದ ಎದುರು ಅಶ್ವತ್ಥವೃಕ್ಷವಿದ್ದು, ಅಲ್ಲಿ ಗಣಪನ ಮೂರ್ತಿ, ಪುಟ್ಟ ಅಂಜಲೀಬದ್ಧ ಆಂಜನೇಯ ಹಾಗೂ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ.

ಹಿಂದಿನ ಲೇಖನಶಾಸಕರನ್ನು ಬಾಂಬೆಗೆ ಕರೆದುಕೊಂಡಡು ಹೋಗಿದ್ದೇ ಎ.ಎಚ್. ವಿಶ್ವನಾಥ್: ವಿ.ಶ್ರೀನಿವಾಸ ಪ್ರಸಾದ್
ಮುಂದಿನ ಲೇಖನ‘ಕುವೆಂಪು ಗೌರವ ಪುರಸ್ಕಾರ’ಕ್ಕೆ ಜಾನಪದ ವಿದ್ವಾಂಸ ಡಾ.ರಾಮೇಗೌಡ (ರಾಗೌ) ಆಯ್ಕೆ