ಮನೆ ಕಾನೂನು ಕಡಿಮೆ ದರದ ಸೇವೆ ಒದಗಿಸುವ ಮೂಲಕ ಭಾರತವನ್ನು ಜಗತ್ತಿನ ಮಧ್ಯಸ್ಥಿಕೆ ಕೇಂದ್ರವಾಗಿಸುವ ಅಗತ್ಯವಿದೆ: ನ್ಯಾ. ಸೂರ್ಯ...

ಕಡಿಮೆ ದರದ ಸೇವೆ ಒದಗಿಸುವ ಮೂಲಕ ಭಾರತವನ್ನು ಜಗತ್ತಿನ ಮಧ್ಯಸ್ಥಿಕೆ ಕೇಂದ್ರವಾಗಿಸುವ ಅಗತ್ಯವಿದೆ: ನ್ಯಾ. ಸೂರ್ಯ ಕಾಂತ್

0

ತನ್ನ ಅಪಾರ ಸಂಪನ್ಮೂಲಗಳನ್ನು ಬಳಸಿಕೊಂಡು ಕಡಿಮೆ ದರದಲ್ಲಿ ಪರಿಣಾಮಕಾರಿ ಪರಿಹಾರ ಒದಗಿಸಿ ಭಾರತ ಜಾಗತಿಕ ಮಧ್ಯಸ್ಥಿಕೆ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಪಟ್ಟರು.

Join Our Whatsapp Group

ಭಾರತ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (IIAC) ಆಯೋಜಿಸಿದ್ದ “ಅಂತರರಾಷ್ಟ್ರೀಯ ಮಧ್ಯಸ್ಥಿಕೆ: ಭಾರತೀಯ ದೃಷ್ಟಿಕೋನ” ಎಂಬ ವಿಚಾರವಾಗಿ ಏರ್ಪಡಿಸಲಾಗಿದ್ದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಧ್ಯಸ್ಥಿಕೆಯಲ್ಲಿ ಭಾರತದ ಹೆಚ್ಚುತ್ತಿರುವ ಆಸಕ್ತಿ ಮತ್ತು ಅದರ ಕಾರ್ಯತಂತ್ರದ ಅನುಕೂಲಗಳು ಅದನ್ನು ಅಂತರರಾಷ್ಟ್ರೀಯ ಮಧ್ಯಸ್ಥಿಕೆಯ ಸೂಕ್ತ ಅಭ್ಯರ್ಥಿಯನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.

ಸಮಯ ಮತ್ತು ವೆಚ್ಚ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಮಾರುಕಟ್ಟೆಯ ಪ್ರಮುಖ ಸೂಕ್ಷ್ಮ ಅಂಶಗಳಾಗಿದ್ದು ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ವಕೀಲರ ಬೃಹತ್‌ ಸಮೂಹವನ್ನು ಬಳಸಿಕೊಂಡು ಭಾರತ ಕಡಿಮೆ ದರದಲ್ಲಿ ಮಧ್ಯಸ್ಥಿಕೆ ಸೇವೆ ಒದಗಿಸಬಹುದು. ಭಾರತ ವಿಶ್ವಾಸಾರ್ಹ ಹಾಗೂ ಕಡಿಮೆ ವೆಚ್ಚದ ಮಧ್ಯಸ್ಥಿಕೆ ಆಯ್ಕೆ ನೀಡಬಹುದು. ದಾವೆದಾರರನ್ನು ಹೆಚ್ಚು ಮೌಲ್ಯಯುತವಾಗಿ ಕಾಣುವುದು ನಮ್ಮ ಪ್ರಯತ್ನವಾಗಬೇಕು.  ಭಾರತ ಸ್ವಾಭಾವಿಕವಾಗಿಯೇ ಮಧ್ಯಸ್ಥಿಕೆಗೆ ಅಗತ್ಯವಾದ ಸೌಕರ್ಯ ಹೊಂದಿದೆ. ಆಸ್ಟ್ರೇಲಿಯಾ, ಯೂರೋಪ್‌, ಆಫ್ರಿಕಾವನ್ನು ಏಷ್ಯಾದೊಂದಿಗೆ ಸಂಪರ್ಕಿಸುವ ಪ್ರಮುಖ ಜಾಗತಿಕ ವ್ಯಾಪಾರ ಮಾರ್ಗಗಳ ಮಧ್ಯದಲ್ಲಿ ಭಾರತ ಸ್ಥಾನ ಪಡೆದಿದೆ. ಇದೆಲ್ಲದರ ಹೊರತಾಗಿಯೂ, ಏಕೆ ಗುರಿ ಸಾಧಿಸಲಾಗುತ್ತಿಲ್ಲ ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕು. ಸರಳವಾಗಿ ಹೇಳುವುದಾದರೆ, ನಾವು ಅಭಿವೃದ್ಧಿ ಹೊಂದುತ್ತಿರುವ ಉತ್ಪನ್ನವನ್ನು ಮಾರುಕಟ್ಟೆಗೆ ತರುವಲ್ಲಿ ವಿಫಲರಾಗಿದ್ದೇವೆ. ಕಾರ್ಯವಿಧಾನದ ಚೌಕಟ್ಟುಗಳನ್ನು ಸರಳಗೊಳಿಸುವುದು ನಿರ್ಣಾಯಕ ಸುಧಾರಣೆಯಾಗುತ್ತದೆ. ಮಧ್ಯಸ್ಥಿಕೆ ತೀರ್ಪುಗಳನ್ನು ಜಾರಿಗೊಳಿಸಲು ನ್ಯಾಯಾಂಗ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಬೇಕು. ಮಧ್ಯಸ್ಥಿಕೆಯನ್ನು ಮೇಲ್ವಿಚಾರಣೆ ಮಾಡಲು ಕೇಂದ್ರೀಕೃತ ಸಂಸ್ಥೆಯೊಂದರ ಅಗತ್ಯವಿದೆ ಎಂದರು.

ನ್ಯಾಯಮೂರ್ತಿಗಳಾದ ವಿಭು ಬಖ್ರು, ನ್ಯಾ ತೇಜಸ್ ಕರಿಯಾ, ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ಕಾರ್ಯದರ್ಶಿ ಡಾ. ರಾಜೀವ್ ಮಣಿ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.