ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್’ಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್–ಪಿಜಿ) ನಿಗದಿಯಂತೆ ಮಾರ್ಚ್ 5ರಂದು ನಡೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ತಿಳಿಸಿದ್ದಾರೆ.
ಶುಕ್ರವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಗೌರವ್ ಗೊಗೋಯಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾರೂ ಪರೀಕ್ಷೆಯಿಂದ ಹೊರಗುಳಿಯಬಾರದು ಎಂಬ ಕಾರಣಕ್ಕೆ ಸಚಿವಾಲಯವು, ಇಂಟರ್ನ್’ಶಿಪ್ ಇನ್ನೂ ಪೂರ್ಣಗೊಳಿಸದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕಟ್ ಆಫ್ ದಿನಾಂಕವನ್ನು ವಿಸ್ತರಿಸಿದೆ ಎಂದು ಹೇಳಿದರು.
2023ರ ನೀಟ್–ಪಿಜಿಯನ್ನು ಕೆಲ ತಿಂಗಳವರೆಗೆ ಮುಂದೂಡಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಯನ್ನು ಗೌರವ್ ಅವರು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಂಡವೀಯಾ ಅವರು, ಮಾರ್ಚ್ 5ರಂದೇ ಪರೀಕ್ಷೆ ನಡೆಸಲಾಗುವುದು. ಐದು ತಿಂಗಳ ಮುಂಚೆಯೇ ಈ ಕುರಿತು ಘೋಷಿಸಲಾಗಿತ್ತು. ಇದಕ್ಕಾಗಿ ಪರೀಕ್ಷಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.














