ನವದೆಹಲಿ(New Delhi): ‘ನೀಟ್ ಪಿಜಿ–21’ರಲ್ಲಿ ಅರ್ಹತೆ ಪಡೆದವರಿಗಾಗಿ ನಡೆದ ಅಖಿಲ ಭಾರತ ಕೋಟಾದ ಕೌನ್ಸೆಲಿಂಗ್ ನಂತರವೂ ಉಳಿದಿರುವ 1,456 ಸೀಟುಗಳ ಭರ್ತಿಗೆ, ಇನ್ನೊಂದು ಸುತ್ತಿನ ವಿಶೇಷ ಕೌನ್ಸೆಲಿಂಗ್ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ವಿಶೇಷ ಕೌನ್ಸೆಲಿಂಗ್‌ಗೆ ಅವಕಾಶ ನೀಡದಿರುವ ಸರ್ಕಾರದ ಮತ್ತು ಎಂಸಿಸಿ (ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ) ನಿರ್ಧಾರವು ಸಾರ್ವಜನಿಕ ಆರೋಗ್ಯ, ವೈದ್ಯಕೀಯ ಶಿಕ್ಷಣದ ಹಿತಾಸಕ್ತಿಯಿಂದ ಕೂಡಿದೆ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಹಾಗೆ ಮಾಡಿದರೆ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮವಾಗಲಿದೆ ಎಂದು ಕೋರ್ಟ್ ಹೇಳಿದೆ.
ಗುರುವಾರ ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್, ಆದೇಶವನ್ನು ಕಾಯ್ದಿರಿಸಿತ್ತು. ಕೇಂದ್ರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಬಲ್ಬೀರ್ ಸಿಂಗ್ ಅವರು, ಈಗಾಗಲೇ ಫೆಬ್ರುವರಿಯಲ್ಲಿ ತರಗತಿಗಳು ಪ್ರಾರಂಭವಾಗಿವೆ.
ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಿದರೆ ನೀಟ್ 2022ರಲ್ಲಿ ಪ್ರವೇಶ ಪಡೆಯುವವರಿಗೆ ನಡೆಯುವ ಬೋಧನಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು.