ಮನೆ ಕಾನೂನು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರೂ ಎಂವಿ ಕಾಯಿದೆ ಸೆಕ್ಷನ್ 163 ಎ ಪ್ರಕಾರ ಪರಿಹಾರ ನೀಡಬೇಕು: ಮಂಗಳೂರು...

ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರೂ ಎಂವಿ ಕಾಯಿದೆ ಸೆಕ್ಷನ್ 163 ಎ ಪ್ರಕಾರ ಪರಿಹಾರ ನೀಡಬೇಕು: ಮಂಗಳೂರು ನ್ಯಾಯಮಂಡಳಿ

0

ದುಡುಕು ಮತ್ತು ನಿರ್ಲಕ್ಷ್ಯದಿಂದ ಅಪಘಾತ ಉಂಟಾಗಿ ಸಾವನ್ನಪ್ಪಿದ್ದರೂ ಮೋಟಾರು ವಾಹನ ಕಾಯಿದೆಯ ಸೆಕ್ಷನ್ 163 ಎ ಪ್ರಕಾರ ಮೃತರ ಕಾನೂನಾತ್ಮಕ ಉತ್ತರಾಧಿಕಾರಿ ಪರಿಹಾರ ಪಡೆಯಲು ಅರ್ಹರು ಎಂದು ಮಂಗಳೂರಿನ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ-1 ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ತಿಳಿಸಿದೆ.

Join Our Whatsapp Group

ಕಾಯಿದೆಯ ಸೆಕ್ಷನ್ 163 ಎ ದೃಷ್ಟಿಯಿಂದ ಮೃತಪಟ್ಟ ಇಲ್ಲವೇ ಗಾಯಗೊಂಡ ಅಥವಾ ಇನ್ನಾವುದೇ ವ್ಯಕ್ತಿ ಕಡೆಯಿಂದ ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆ ನಡೆದಿರುವುದನ್ನು ಸಾಬೀತುಪಡಿಸುವಂತೆ ಅರ್ಜಿದಾರರು ಮನವಿ ಮಾಡಬೇಕಾಗಿಲ್ಲ. ಮೋಟಾರುವಾಹನ ಬಳಕೆಯಿಂದಾಗಿ ನಡೆದ ಅಪಘಾತದಲ್ಲಿ ಸಾವು ಇಲ್ಲವೇ ಗಾಯ ಉಂಟಾಗಿದೆ ಎಂಬುದನ್ನು ಅರ್ಜಿದಾರರು ಸಾಬೀತುಪಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ನ್ಯಾಯಮಂಡಳಿಯ ಸದಸ್ಯರಾದ ರವೀಂದ್ರ ಎಂ ಜೋಷಿ ಜೂನ್ 7ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

ಅರ್ಜಿದಾರರ ಮಗ ಸಾನು ಅಬ್ರಾಹಂ ಅವರು ಮಂಗಳೂರಿನ ಹೊರವಲಯದಲ್ಲಿರುವ ತೊಕ್ಕೊಟ್ಟಿನಿಂದ ಮಂಗಳೂರು ನಗರದ ಕಡೆಗೆ 22.03.2021ರ ರಾತ್ರಿ 10-15ರ ಸುಮಾರಿಗೆ ತೆರಳುತ್ತಿದ್ದರು. ಆಗ ನೇತ್ರಾವತಿ ನದಿಯ ಸೇತುವೆ ಮೇಲೆ ಅವರ ಮೋಟಾರ್ ಸೈಕಲ್, ಮುಂದೆ ಸಾಗುತ್ತಿದ್ದ ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಅವರು ಗಾಯಗೊಂಡು ನಂತರ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸ್ಕೂಟರ್ ಸವಾರರಿಗೂ ಗಾಯಗಳಾಗಿದ್ದವು.

ಮೃತರು ಸಾವನ್ನಪ್ಪುವ ಮುನ್ನ ಆರೋಗ್ಯದಿಂದಿದ್ದರು ಅವರಿಗೆ ಕೇವಲ 20 ವರ್ಷಗಳಾಗಿದ್ದು ಹೋಟೆಲ್ ಮ್ಯಾನೇಜ್ಮೆಂಟ್ ಅಧ್ಯಯನ ಮಾಡುತ್ತಿದ್ದರು. ತಿಂಗಳಿಗೆ ರೂ 3,300/- ಗಳಿಸುತ್ತಿದ್ದರು. ತಾವು  ಮೃತರ ಆದಾಯವನ್ನೇ ಆಧರಿಸಿದ್ದೆವು. ಸ್ಕೂಟರ್ ಚಲಾಯಿಸುತ್ತಿದ್ದವರ ನಿರ್ಲಕ್ಷ್ಯದಿಂದಾಗಿ ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ವಾಹನದ ಮಾಲೀಕರು ಮತ್ತು ಸ್ಕೂಟರ್ಗೆ ವಿಮೆ ಒದಗಿಸಿದ್ದ ನ್ಯೂ ಅಶೂರೆನ್ಸ್ ಕೊ ಲಿಮಿಟೆಡ್ ಸಾವಿಗೆ ಹೊಣೆಗಾರರಾಗಿದ್ದು ಅವರು ಪರಿಹಾರ ಪಾವತಿಸಬೇಕೆಂದು ಅರ್ಜಿ ಸಲ್ಲಿಸಿದ್ದ ಮೃತರ ತಂದೆ ಮತ್ತು ಸಹೋದರ ಕೋರಿದ್ದರು.

ಆದರೆ ಸ್ಕೂಟರ್ ಸವಾರರ ದುಡುಕು ಮತ್ತು ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬುದನ್ನು ವಿಮಾ ಕಂಪೆನಿ ನಿರಾಕರಿಸಿತ್ತು. ರಸ್ತೆಯ ಬಲಭಾಗದಲ್ಲಿ ಸ್ಕೂಟರ್ ಸವಾರರು ನಿಧಾನಕ್ಕೆ ಚಲಿಸುತ್ತಿದ್ದರು. ಮೃತರೇ ದುಡುಕು ಮತ್ತು ನಿರ್ಲಕ್ಷ್ಯದಿಂದ ವೇಗವಾಗಿ ಬಂದು ಹಿಂದಿನಿಂದ ಸ್ಕೂಟರ್ಗೆ ಡಿಕ್ಕಿ ಹೊಡೆದರು. ಅಲ್ಲದೆ ಅರ್ಜಿದಾರರು ಮೃತರ ಕಾನೂನಾತ್ಮಕ ಉತ್ತರಾಧಿಕಾರಿ ಅಲ್ಲ ಎಂದು ಅದು ಹೇಳಿತ್ತು. ಮೃತರ ವಯಸ್ಸು, ವೃತ್ತಿ, ಗಳಿಕೆ ಹಾಗೂ ಅವರ ಚಾಲನಾ ಪರವಾನಗಿಯ ಸಿಂಧುತ್ವದ ಬಗ್ಗೆಯೂ ವಿಮಾ ಕಂಪೆನಿ ಅನುಮಾನ ವ್ಯಕ್ತಪಡಿಸಿತ್ತು. ಅಪಘಾತಕ್ಕೆ ಅವರೇ ಏಕಮಾತ್ರ ಹೊಣೆಗಾರರು. ಹೀಗಾಗಿ ಮೃತರ ಮೋಟಾರ್ ಸೈಕಲ್ಗೆ ವಿಮೆ ಒದಗಿಸಿದ್ದ ಕಂಪೆನಿಯೇ ಪರಿಹಾರದ ಹೊಣೆ ಹೊರಬೇಕು ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸುವಂತೆ ಅದು ಕೋರಿತ್ತು.

ವಾದ ಆಲಿಸಿದ ನ್ಯಾಯಮಂಡಳಿ ಮುಂದೆ ಹೋಗುತ್ತಿದ್ದ ಸ್ಕೂಟರ್ಗೆ ದ್ವಿಚಕ್ರ ವಾಹನ ಡಿಕ್ಕಿ ಒಡೆದು ಮೃತರು ನಿರ್ಲಕ್ಷ್ಯ ಮತ್ತು ದುಡುಕಿನಿಂದ ಸಾವು ತಂದುಕೊಂಡಿದ್ದಾರೋ ಇಲ್ಲವೋ ಎಂಬುದು ಅಪ್ರಸ್ತುತ. ಘಟನೆಯಲ್ಲಿ ಎರಡು ವಾಹನಗಳು ಭಾಗಿಯಾಗಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ ಎಂಬುದಾಗಿ ಹೇಳಿದೆ.

ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು, ವಾಹನಗಳನ್ನು ಒಳಗೊಂಡ ಅಪಘಾತದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬ ಅಂಶ ಸಾಬೀತಾದರೆ ಸಾಕು. ನಿರ್ಲಕ್ಷ್ಯದಿಂದಾಗಿ ಅಪಘಾತಕ್ಕೆ ಕಾರಣರಾದರೂ ಮೋಟಾರುವಾಹನಕಾಯಿದೆ ಪ್ರಕಾರ ಮೃತರ ಕಾನೂನಾತ್ಮಕ ಉತ್ತರಾಧಿಕಾರಿ ಪರಿಹಾರ ಪಡೆಯಲು ಅರ್ಹರು ಎಂದು ಅದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸೆಕ್ಷನ್ 163 ಎ ಅಡಿ ಸಲ್ಲಿಸಲಾದ ಅರ್ಜಿಯನ್ನು ಅನುಮತಿಸಿದ ನ್ಯಾಯಾಧೀಶರು ಒಟ್ಟು  4,90,200 ರೂಪಾಯಿಗಳನ್ನು ಅರ್ಜಿ ಸಲ್ಲಿಸಿದ ದಿನಾಂಕದಿಂದ ಅನ್ವಯಿಸುವಂತೆ ವಾರ್ಷಿಕ ಶೇ 6ರ  ಬಡ್ಡಿದರದಲ್ಲಿ ಪಾವತಿಸಬೇಕು ಎಂದು ವಿಮಾ ಕಂಪೆನಿಗೆ ನಿರ್ದೇಶಿಸಿದ್ದಾರೆ. ಎಂಟು ವಾರದೊಳಗೆ ವಿಮಾ ಕಂಪೆನಿ ಹಣವನ್ನು ಠೇವಣಿ ಇಡಬೇಕು. ಮೃತ ವ್ಯಕ್ತಿಯ ತಂದೆ ಮತ್ತು ಸಹೋದರ ಸಮವಾಗಿ ಶೇ  50ರಷ್ಟು ಪರಿಹಾರ ಪಡೆಯಲು ಅರ್ಹರಾಗಿದ್ದು ಅವರ ಖಾತೆಗೆ ಹಣ ಜಮೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.