ಮನೆ ರಾಜಕೀಯ ನೇಹಾ ಹಿರೇಮಠ ಕೊಲೆ ಪ್ರಕರಣ ಸಿಐಡಿ ತನಿಖೆಗೆ: ಜಿ.ಪರಮೇಶ್ವರ

ನೇಹಾ ಹಿರೇಮಠ ಕೊಲೆ ಪ್ರಕರಣ ಸಿಐಡಿ ತನಿಖೆಗೆ: ಜಿ.ಪರಮೇಶ್ವರ

0

ತುಮಕೂರು: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಸೋಮವಾರ ತಿಳಿಸಿದರು.

Join Our Whatsapp Group

ನೇಹಾ ಕೊಲೆ ವಿಚಾರವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಕೆ ಮಾಡಿಕೊಂಡು, ಅಪಪ್ರಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ ಸತ್ಯಾಸತ್ಯತೆ ಹೊರ ತರುವ ಸಲುವಾಗಿ ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

10ರಿಂದ 12 ದಿನಗಳಲ್ಲಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತನಿಖಾಧಿಕಾರಿಗಳ ತಂಡ ಸೋಮವಾರವೇ ಹುಬ್ಬಳ್ಳಿಗೆ ತೆರಳಿದ್ದು, ತನಿಖೆ ಕೈಗೆತ್ತಿಕೊಂಡಿದೆ. ನೇಹಾ ಕೊಲೆಯ ಹಿಂದೆ ಇನ್ನೂ ನಾಲ್ವರು ಇದ್ದಾರೆ ಎಂದು ಅವರ ಕುಟುಂಬದವರು ಹೇಳಿದ್ದಾರೆ. ಆ ಬಗ್ಗೆಯೂ ತನಿಖೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ತನಿಖೆ ನಂತರ ಸತ್ಯಾಂಶ ಹೊರ ಬರಲಿದ್ದು, ನೊಂದ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಹೇಳಿದರು.

ವಿಚಾರವನ್ನು ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಯವರು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ.  ಪ್ರೇಮದ ವಿಚಾರದಲ್ಲಿ ಕೊಲೆ ನಡೆದಿಲ್ಲ ಎಂದು ನನಗೆ ಬಂದ ಪ್ರಾಥಮಿಕ ವರದಿಯನ್ನು ಆಧರಿಸಿ ಹೇಳಿಕೆ ನೀಡಿದ್ದೆ. ಈ ಬಗ್ಗೆ ವಿದ್ಯಾರ್ಥಿಯ ತಂದೆ– ತಾಯಿಗೆ ನೋವಾಗಿದ್ದರೆ ವಿಷಾದವನ್ನೂ ವ್ಯಕ್ತಪಡಿಸಿದ್ದೇನೆ. ಆದರೆ ಅದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಟುವಾಗಿ ಟೀಕಿಸುವುದು, ನಿಂದಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಲೆ ಆರೋಪಿಯನ್ನು ಘಟನೆ ನಡೆದ ಒಂದು ಗಂಟೆಯಲ್ಲೇ ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ. ಆದರೆ ಬಿಜೆಪಿಯವರಿಗೆ ತಾಳ್ಮೆ ಇಲ್ಲದೆ ಅನಗತ್ಯವಾಗಿ ಈ ವಿಚಾರವನ್ನು ರಾಜಕೀಯಕ್ಕೆ ಎಳೆದು ತಂದಿದ್ದಾರೆ ಎಂದು ಆರೋಪಿಸಿದರು.