ತುಮಕೂರು: ನಗರದ ಬಿವಿಬಿ ಇಂಜಿನಿಯರ್ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಕೊಲೆಯಾದ ನೇಹಾ ಮತ್ತು ಆರೋಪಿ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ನೇಹಾ ಫಯಾಜ್ನಿಂದ ದೂರವಾಗಲು ಯತ್ನಿಸಿದ್ದಾಳೆ. ಇದರಿಂದ ಕೋಪಗೊಂಡ ಫಯಾಜ್ ಕೊಲೆ ಮಾಡಿದ್ದಾನೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಘಟನೆ ನಡೆದ ವೇಳೆ ಮಗಳ ಜೊತೆ ಇದ್ದ, ತಾಯಿ ಮೇಲೂ ಹಲ್ಲೆ ಮಾಡಲಾಗಿದೆ, ಆದರೆ ನೇಹಾ ತಾಯಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ಎಂಸಿಎ ವಿದ್ಯಾರ್ಥಿನಿ ನೇಹಾಳನ್ನು ಕೊಲೆ ಮಾಡಿದ ಆರೋಪಿ ಫಯಾಜ್ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಜೈ ಶ್ರೀರಾಮ್ ಕೂಗಿದ್ದಕ್ಕೆ ಹಲ್ಲೆ: ಕಠಿಣ ಕ್ರಮ
ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ ಯುವಕರ ಮೇಲೆ ಹಲ್ಲೆ ಮಾಡಿದ್ದು ದುರದೃಷ್ಟಕರ. ಕಾನೂನಿನ ವಿರುದ್ಧವಾಗಿ ನಡೆದುಕೊಂಡರೆ ಯಾರನ್ನೂ ರಕ್ಷಣೆ ಮಾಡಲ್ಲ. ರಾಜ್ಯದ ಜನತೆಗೆ ಗೃಹ ಸಚಿವನಾಗಿ ಭರವಸೆ ಕೊಡಲು ಬಯಸುತ್ತೇನೆ. ರಾಮನವಮಿ ದಿನ ಜೈ ಶ್ರೀರಾಮ್ ಘೋಷಣೆ ಕೂಗುವುದು ಸಹಜ. ಅದಕ್ಕೆ ಇನ್ನೊಬ್ಬರು ಬೇರೆ ಘೋಷಣೆ ಕೂಗಿದ್ದಾರೆ. ಯಾರನ್ನೂ ರಕ್ಷಣೆ ಮಾಡುವುದಾಗಲಿ, ಓಲೈಸುವುದಾಗಲಿ ಮಾಡಲ್ಲ. ಯಾವುದೇ ಮುಲಾಜಿಲ್ಲದೆ ಕಾನೂನಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜೈ ಶ್ರೀರಾಮ ಅಂತ ಕೂಗಿದವರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ವೀಕ್ ಸೆಕ್ಷನ್ ಹಾಕಲಾಗಿದೆ ಎಂಬ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೆಕ್ಷನ್ ಗಳನ್ನು ಹಾಕಲಾಗುವುದು. ಪ್ರಾರಂಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಹಂತದಲ್ಲಿ ಸಾಕ್ಷಾಧಾರಗಳ ಆಧಾರದ ಮೇಲೆ ಸೆಕ್ಷನ್ ಹಾಕಲಾಗುತ್ತದೆ. ಈ ಸೆಕ್ಷನ್ ಹಾಕಿಲ್ಲ, ಆ ಸೆಕ್ಷನ್ ಹಾಕಿಲ್ಲ ಅನ್ನಲು ಆಗಲ್ಲ. ತನಿಖೆಯ ಆಧಾರದ ಮೇಲೆ ಸೆಕ್ಷನ್ ಹಾಕಲಾಗುತ್ತದೆ.