ಮನೆ ರಾಜ್ಯ ಸಿಎಂಗೆ ಮನವಿ ಬೆನ್ನಲ್ಲೇ ನೇಹಾ ತಂದೆ ನಿರಂಜನ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆ

ಸಿಎಂಗೆ ಮನವಿ ಬೆನ್ನಲ್ಲೇ ನೇಹಾ ತಂದೆ ನಿರಂಜನ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆ

0

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹತ್ಯೆಯಾಗಿ ವಾರವೇ ಕಳೆದಿದೆ. ನಿನ್ನೆ ನೇಹಾ ನಿವಾಸಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ, ಪೋಷಕರಿಗೆ ಸಾಂತ್ವನ ಹೇಳಿದ್ದರು. ಜೊತೆಗೆ ಆರೋಪಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿದ್ದರು.

Join Our Whatsapp Group

ಈ ವೇಳೆ ಭದ್ರತೆ ಒದಗಿಸುವಂತೆ ಸಿಎಂಗೆ ನೇಹಾ ತಂದೆ ನಿರಂಜನ ಮನವಿ ಮಾಡಿದ ಬೆನ್ನಲ್ಲೇ ನಗರದ ಬಿಡನಾಳದಲ್ಲಿರುವ ನಿರಂಜನ ಹಿರೇಮಠ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜೀವ ಬೆದರಿಕೆಯಿದೆ ಎಂದು ನಿರಂಜನ ಅವರು ದೂರು ನೀಡಿದ್ದರು. ಹೀಗಾಗಿ ಭದ್ರತೆ ಒದಗಿಸುವ ಮೂಲಕ ರಾಜ್ಯ ಸರ್ಕಾರ ಸ್ಪಂದಿಸಿದೆ.

ನಿನ್ನೆ ನೇಹಾ ನಿವಾಸಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ನೇಹಾ ತಂದೆ ನಿರಂಜನ್‌ ಹಾಗೂ ತಾಯಿ ಗೀತಾಗೆ ಸಾಂತ್ವನ ಹೇಳಿದ್ದರು. ಪ್ರಕರಣವನ್ನ ಸಿಐಡಿಗೆ ವಹಿಸಲಾಗಿದೆ. ಆರೋಪಿಗೆ ಘೋರ ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತೇನೆ ಎಂದಿದ್ದರು. ಶೀಘ್ರದಲ್ಲಿಯೇ ಡಿಸಿಎಂ ಡಿಕೆ ಶಿವಕುಮಾರ್ ಕೂಡ ನಿರಂಜನ್‌ ಮನೆಗೆ ಭೇಟಿ ನೀಡಲಿದ್ದಾರೆ.

ಇನ್ನು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್, ಎಸ್​ಪಿ ವೆಂಕಟೇಶ್ ನೇತೃತ್ವದ ತಂಡ ನಿನ್ನೆ ನೇಹಾ ನಿವಾಸಕ್ಕೆ ಭೇಟಿ ನೀಡಿತ್ತು. ಪೋಷಕರಿಂದ ಹೇಳಿಕೆ ಪಡೆದಿತ್ತು. ಈ ವೇಳೆ ಮಾತನಾಡಿದ್ದ ನೇಹಾ ತಂದೆ ನಿರಂಜನ್‌, ಕೆಲ ದಿನಗಳಿಂದ ನಮಗೆ ಬೆದರಿಕೆ ಇದೆ. ಯಾರ್ಯಾರೋ ಮನೆಗೆ ಬಂದು ವಿಡಿಯೋ ಮಾಡುತ್ತಿದ್ದಾರೆ ಅಂತಾ ಆರೋಪಿಸಿದ್ದರು. ಅಷ್ಟೇ ಅಲ್ಲ ಫಯಾಜ್​ ಪ್ರಾಣ ತಗೋತೀನಿ ಅಂತಾ ನನ್ನ ಮಗಳ ಶವದ ಮೇಲೆ ನಾನು ಶಪಥ ಮಾಡಿದ್ದೇನೆ ಎಂದು ಹೇಳಿದ್ದರು.

ಏಪ್ರಿಲ್‌ 18 ರಂದು ನೇಹಾ ಹತ್ಯೆಯಾಗಿತ್ತು ನಿಜ. ಆದರೆ ಅದಕ್ಕೂ ಐದು ದಿನ ಮುನ್ನವೇ ಚಾಕು ಖರೀದಿಸಿದ್ದ ಫಯಾಜ್‌, ನೇಹಾ ಮನೆ ಬಳಿ ಓಡಾಡಿದ್ದನಂತೆ. ಏಪ್ರಿಲ್‌ 18 ರಂದು ಕಾಲೇಜ್‌ ಬಳಿ ಸ್ಕೂಟಿಯಲ್ಲಿ ಹೋಗಿದ್ದವನು, ರಸ್ತೆ ಕಡೆ ಮುಖ ಮಾಡಿಯೇ ಸ್ಕೂಟಿ ನಿಲ್ಲಿಸಿದ್ದ. ಕೊಲೆ ಬಳಿಕ ಎಸ್ಕೇಪ್ ಆಗಲು ಎಲ್ಲಾ ಪ್ಲ್ಯಾನ್‌ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ.

ಹಿಂದಿನ ಲೇಖನʼಕೂಲಿʼಯಾಗಿ ಪ್ರೇಕ್ಷಕರ ಮುಂದೆ ಬರಲಿರುವ ಸೂಪರ್‌ ಸ್ಟಾರ್‌ ರಜಿನಿಕಾಂತ್‌:  171 ಸಿನಿಮಾದ ಟೈಟಲ್‌ ಟೀಸರ್‌ ರಿಲೀಸ್‌
ಮುಂದಿನ ಲೇಖನಮಂಗಳೂರಿನಲ್ಲಿ ರೌಡಿಶೀಟರ್​ಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು