ಮನೆ ರಾಜ್ಯ ಬೆಂಕಿಯ ಬಲೆಯಲ್ಲಿ ನೇಪಾಳ; ಕನ್ನಡಿಗರ ರಕ್ಷಣೆಗೆ ತಂಡ ರಚಿಸಿದ- ರಾಜ್ಯ ಸರ್ಕಾರ

ಬೆಂಕಿಯ ಬಲೆಯಲ್ಲಿ ನೇಪಾಳ; ಕನ್ನಡಿಗರ ರಕ್ಷಣೆಗೆ ತಂಡ ರಚಿಸಿದ- ರಾಜ್ಯ ಸರ್ಕಾರ

0

ಬೆಂಗಳೂರು : ನೇಪಾಳದಲ್ಲಿ ಭುಗಿಲೆದ್ದ, ಪ್ರತಿಭಟನೆಯಿಂದ ದೇಶಾದ್ಯಂತ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಈ ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.

ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ವಹಿಸಿದ್ದಾರೆ. ಕನ್ನಡಿಗರು ನೇಪಾಳದಲ್ಲಿ ಸಿಲುಕಿರುವ ಸುರಕ್ಷಿತವಾಗಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರು ವಿವಿಧ ತಂಡಗಳಲ್ಲಿ ಇರುವ ಕನ್ನಡಿಗರ ಸಂಪರ್ಕದಲ್ಲಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಕಚೇರಿ ಮಾಧ್ಯಮ ಪ್ರಕಟಣೆ ತಿಳಿಸಿದೆ.

ನೇಪಾಳದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ ಸೇನೆ ಕಾರ್ಯಾಚರಣೆಗೆ ಇಳಿದಿದೆ. ಕಠ್ಮಂಡು ನಗರವನ್ನ ನೇಪಾಳಿ ಸೇನೆ ಸುತ್ತುವರಿದಿದ್ದು, ರಾಜಧಾನಿಯಾದ್ಯಂತ ಕರ್ಫ್ಯೂ ಜಾರಿಗೊಳಿಸಿದೆ. ನಾಳೆ ಬೆಳಗ್ಗೆ 6 ಗಂಟೆವರೆಗೆ ಜನರು ರಸ್ತೆಗಿಳಿಯದಂತೆ ಸೂಚನೆ ನೀಡಿದೆ. ಜೊತೆಗೆ ಪ್ರವಾಸಿಗರು ಉಳಿದುಕೊಂಡಿರುವ ಹೊಟೇಲ್, ಲಾಡ್ಜ್ ಆವರಣದ ಗೇಟ್‌ಗಳನ್ನ ಕೂಡಲೇ ಬಂದ್‌ ಮಾಡುವಂತೆ ಸೂಚನೆ ನೀಡಿದೆ. ಇದರೊಂದಿಗೆ ಹಿಂದೂ ದೇವಾಲಯದ ಬಳಿಯೂ ಬಿಗಿ ಭದ್ರತೆ ನೀಡಲಾಗಿದೆ.

ಆನೇಕಲ್‌ ಸೇರಿದಂತೆ ಬೇರೆ ಬೇರೆ ಏರಿಯಾಗಳಿಂದ ಹೊರಟ್ಟಿದ್ದ 27 ಜನರ ಕನ್ನಡಿಗರ ತಂಡವೂ ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಟ್ರಾವೆಲ್ಸ್‌ ಮೂಲಕ ಪ್ರವಾಸ ಹೊರಟಿದ್ದ ತಂಡ ಶನಿವಾರ ವಾಪಸ್‌ ಬರುವ ನಿರೀಕ್ಷೆಯಲ್ಲಿದೆ, ಫ್ಲೈಟ್‌ ಕೂಡ ಬುಕಿಂಗ್‌ ಮಾಡಲಾಗಿದೆ. ಆದ್ರೆ ಸೇನೆಯಿಂದ ಕರ್ಫ್ಯೂ ಜಾರಿಯಾದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಣಕ್ಕೆ ಬರೋವರೆಗೆ ಅಲ್ಲಿಂದ ಹೊರಡುವುದು ಕಷ್ಟಸಾಧ್ಯವಾಗುತ್ತದೆ ಎಂದು ಕನ್ನಡಿಗರು ಗೋಳಿಟ್ಟಿದ್ದಾರೆ.

ಭುಗಿಲೆದ್ದ ಪ್ರವಾಸಿಗರು ಉಳಿದುಕೊಂಡಿದ್ದ ಬಿಲ್ಡಿಂಗ್‌ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಸುತ್ತಮುತ್ತ ನಾಲ್ಕು ಕಡೆ ಬೆಂಕಿ ಹಚ್ಚಿರೋದ್ರಿಂದ ಕನ್ನಡಿಗರು ಜೀವ ಭಯದಲ್ಲಿದ್ದಾರೆ. ಸದ್ಯ ಈ ಪ್ರವಾಸಿ ತಂಡದೊಂದಿಗೆ ಸಚಿವ ರಾಮಲಿಂಗಾ ರೆಡ್ಡಿ, ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್‌ ಸಿಂಗ್ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ಕರೆತರುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇನ್ನೂ ಕೆಲ ಪ್ರವಾಸಿ ತಂಡಗಳು ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿವೆ ಎಂದು ತಿಳಿದುಬಂದಿದೆ.