ಕಠ್ಮಂಡು : ನೇಪಾಳದಲ್ಲಿ ಭುಗಿಲೆದ್ದ ಯುಜನರ ದಂಗೆ ಇಂದು ಹೊಸ ತಿರುವು ಪಡೆದುಕೊಂಡಿದೆ. ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಝೆನ್ ಝಡ್ ಪ್ರತಿಭಟನಾ ಗುಂಪು ಇಂದು ಅಧಿಕೃತವಾಗಿ ಘೋಷಿಸಿದ್ದು, ಪ್ರತಿಭಟನಾಕಾರರ ಇನ್ನೊಂದು ವರ್ಗ ಸುಶೀಲಾ ಕರ್ಕಿ ಅವರ ವಿರುದ್ಧ ತಿರುಗಿಬಿದ್ದಿದೆ.
ಸಂವಿಧಾನವು ಅವರನ್ನ ಪ್ರಧಾನಿಯಾಗಲು ಅನುಮತಿಸಲ್ಲ ಎಂದು ಅಸಮಾಧಾನ ಹೊರಹಾಕಿದೆ. ಅಲ್ಲದೇ ನೇಪಾಳ ವಿದ್ಯುತ್ ಪ್ರಾಧಿಕಾರದ ಮಾಜಿ ಸಿಇಓ ಕುಲ್ಮನ್ ಘಿಸಿಂಗ್ ಅವರ ಹೆಸರನ್ನು ಮಧ್ಯಂತರ ಪ್ರಧಾನಿ ಹುದ್ದೆಗೆ ಸೂಚಿಸಿದೆ. ಹೀಗಾಗಿ ಜೆನ್-ಝಡ್ ಚಳವಳಿಯ ನಾಯಕರ ನಡುವೆ ಬಿರುಕು ಉಂಟಾಗಿದೆ. ಈ ನಡುವೆ ಧರಣ್ ನಗರಪಾಲಿಕೆ ಮೇಯರ್ ಹಾರ್ಕ್ ಸಂಪಂಗ್ ಅವರ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಇದರ ಹೊರತಾಗಿ ಕಠ್ಮಂಡು ಮೇಯರ್ ಬಾಲೆನ್ ಶಾ ಈ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನಾ ನಿರತ ಯುವಕರ ಒಂದು ಬಣವು, ಬಾಲೆನ್ ಶಾ ಪ್ರಧಾನಿ ಹುದ್ದೆಗೆ ಆಸಕ್ತಿ ಹೊಂದಿಲ್ಲ, ಹಾರ್ಕ್ ಸಂಪಂಗ್ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇನ್ನೂ ಸುಶೀಲಾ ಕರ್ಕಿ 70 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅನರ್ಹರೂ ಆಗಿದ್ದಾರೆ. ಆದ್ದರಿಂದ ಕುಲ್ಮನ್ ಅವರನ್ನೇ ಆಯ್ಕೆ ಮಾಡುವುದು ಸೂಕ್ತ ಎಂದು ಹೇಳಿದೆ. ಹೀಗಾಗಿ ಘಿಸಿಂಗ್ ಆಯ್ಕೆ ಬಗ್ಗೆ ಆಸಕ್ತಿ ತೋರಿದೆ.
54 ವರ್ಷದ ಘಿಸಿಂಗ್ ನೇಪಾಳದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ʻಲೋಡ್ ಶೇಡ್ಡಿಂಗ್ ಸಮಸ್ಯೆಗೆ ಅಂತ್ಯ ಹಾಡಿದ್ದರು. ಅಂದು ದೇಶದಲ್ಲಿ ದಿನಕ್ಕೆ 18 ಗಂಟೆಗಳ ಕಾಲ ವಿದ್ಯುತ್ ಸಮಸ್ಯೆ ಎದುರಿಸಬೇಕಿತ್ತು. ಈ ಸಮಸ್ಯೆ ಬಗೆಹರಿಸಿದ್ದರಿಂದ ದೇಶಕ್ಕೆ ಹೆಚ್ಚಿನ ಲಾಭವಾಯಿತು. ಕುಲ್ಮನ್ ಭಾರತದ ಜಾರ್ಖಂಡ್‌ನ ಜಮ್ಶೆದ್‌ಪುರದ ಪ್ರಾದೇಶಿಕ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು ಎಂಬುದು ಗಮನಾರ್ಹವಾಗಿದೆ.















