ಮನೆ ಅಂತಾರಾಷ್ಟ್ರೀಯ ಭಯೋತ್ಪಾದಕರಿಗೆ ಎಂದಿಗೂ ಆಶ್ರಯ ನೀಡುವುದಿಲ್ಲ: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಭಯೋತ್ಪಾದಕರಿಗೆ ಎಂದಿಗೂ ಆಶ್ರಯ ನೀಡುವುದಿಲ್ಲ: ಪಾಕಿಸ್ತಾನಕ್ಕೆ ಭಾರತ ತಿರುಗೇಟು

0

ವಿಶ್ವಸಂಸ್ಥೆ: ನೆರೆಹೊರೆಯ ರಾಷ್ಟ್ರಗಳೊಂದಿಗೆ ಶಾಂತಿ ಬಯಸುವುದಾಗಿ ಹೇಳಿಕೊಳ್ಳುವ ದೇಶವು ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುವುದಿಲ್ಲ.  ಮುಂಬೈ ಮೇಲೆ ನಡೆದ ಭೀಕರ ದಾಳಿಯ ಸಂಚುಕೋರರಿಗೆ ಎಂದಿಗೂ ಆಶ್ರಯ ನೀಡುವುದಿಲ್ಲ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಸಭೆಯಲ್ಲಿ ಮಾತನಾಡುವ ವೇಳೆ ಜಮ್ಮು ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದರು.

ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಸಂಬಂಧವನ್ನು ಬಯಸುತ್ತದೆ ಎಂದ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಅಡಿಯಲ್ಲಿ ಕಾಶ್ಮೀರ ಸಮಸ್ಯೆಗೆ ನ್ಯಾಯ ಸಮ್ಮತವಾದ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಮಾತ್ರವೇ ದೀರ್ಘಕಾಲಿಕ ಮತ್ತು ಶಾಶ್ವತ ಶಾಂತಿಯನ್ನು ಖಾತ್ರಿಪಡಿಸಲು ಸಾಧ್ಯ ಎಂದು ಪ್ರತಿಪಾದಿಸಿದ್ದರು.

ವಿಶ್ವಸಂಸ್ಥೆಯಲ್ಲಿ ಭಾರತದ ‘ಪರ್ಮನೆಂಟ್ ಮಿಷನ್‌’ನ ಕಾರ್ಯದರ್ಶಿಯಾಗಿರುವ ಮಿಜಿಟೊ ವಿನಿಟೊ ಪಾಕ್‌ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಅವರು ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಈ ಮಹಾಸಭೆಯನ್ನು ವೇದಿಕೆಯನ್ನಾಗಿಸಿಕೊಂಡಿರುವುದು ವಿಷಾದನೀಯ. ತಮ್ಮ ದೇಶದಲ್ಲಿ ನಡೆಯುವ ದುಷ್ಕೃತ್ಯಗಳನ್ನು ಮರೆಮಾಚಲು ಮತ್ತು ಭಾರತ ವಿರೋಧಿ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಅವರು ಹೀಗೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಅಂತರರಾಷ್ಟ್ರೀಯ ಸಮುದಾಯದಿಂದ ಒತ್ತಡ ಎದುರಾದಾಗ ಮಾತ್ರವೇ ತಾನೂ ಭಯೋತ್ಪಾದನೆ ವಿರುದ್ಧ ಇರುವುದಾಗಿ ಪಾಕಿಸ್ತಾನ ತೋರಿಸಿಕೊಳ್ಳುತ್ತದೆ ಎಂದೂ ಚಾಟಿ ಬೀಸಿದ್ದಾರೆ.