ಮನೆ ಕಾನೂನು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1ರಿಂದ ಜಾರಿಗೆ: ಕೇಂದ್ರ ಕಾನೂನು ಸಚಿವಾಲಯ ಸ್ಪಷ್ಟನೆ

ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1ರಿಂದ ಜಾರಿಗೆ: ಕೇಂದ್ರ ಕಾನೂನು ಸಚಿವಾಲಯ ಸ್ಪಷ್ಟನೆ

0

ದೆಹಲಿ: ಐಪಿಸಿ, ಸಿಆರ್ ಪಿಸಿ ಹಾಗೂ ಇಂಡಿಯನ್ ಎವಿಡೆನ್ಸ್ ಕಾಯ್ದೆಗಳನ್ನು ಪರಿಷ್ಕರಿಸಿ ಹೊಸದಾಗಿ ರೂಪಿಸಿರುವ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಇದೇ ಜುಲೈ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ ಎಂದು ಕೇಂದ್ರ ಕಾನೂನು ಸಚಿವಾಲಯ ಹೇಳಿದೆ.

Join Our Whatsapp Group

ಈ ಕುರಿತಂತೆ ಸುದ್ದಿ ಸಂಸ್ಥೆ ಪಿಟಿಐಗೆ ಹೇಳಿಕೆ ನೀಡಿರುವ ಕೇಂದ್ರ ಕಾನೂನು ಸಚಿವರು, “ಜುಲೈ 1 ರಿಂದ, ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳು ಜಾರಿಗೆ ಬರಲಿವೆ. ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಮೂರು ನೂತನ ಕಾನೂನುಗಳು ಹಲವು ಹೊಸ ವಿಚಾರಗಳನ್ನು ಹೊಂದಿವೆ. ಹೀಗಾಗಿ ಹೊಸ ಕಾನೂನುಗಳ ಜಾರಿಯನ್ನು ಮರುಪರಿಶೀಲಿಸುವ ಯಾವುದೇ ಯೋಚನೆ ಕೇಂದ್ರದ ಮುಂದಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಕಾನೂನು ಸಚಿವರಿಗೆ ಪತ್ರ ಬರೆದು, ಹೊಸ ಕಾನೂನುಗಳ ಬಗ್ಗೆ ಹಲವು ವಕೀಲರು ಮತ್ತು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವುಗಳನ್ನು ತಡೆಹಿಡಿಯಬೇಕು ಎಂದು ಮನವಿ ಮಾಡಿದ್ದರು. ಇದೀಗ ಕಾನೂನು ಸಚಿವರು ಹೊಸ ಕ್ರಿಮಿನಲ್ ಕಾನೂನುಗಳ ಮರುಪರಿಶೀಲನೆ ನಿರಾಕರಿಸಿದ್ದಾರೆ.

2023 ರ ಡಿಸೆಂಬರ್ ನಲ್ಲಿ ಹೊಸ ಕಾನೂನುಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಅದೇ ತಿಂಗಳಲ್ಲಿ ರಾಷ್ಟ್ರಪತಿ ಒಪ್ಪಿಗೆಯನ್ನೂ ಪಡೆಯಲಾಗಿತ್ತು. 2024ರ ಫೆಬ್ರವರಿ 25 ರಂದು ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರ, ಹೊಸ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದಿತ್ತು.