ಮನೆ ರಾಷ್ಟ್ರೀಯ ಹೊಸದಿಲ್ಲಿ: ಕೋವಿಡ್ ಸೋಂಕಿನಿಂದ 11 ಮಂದಿ ಸಾವು, 100 ರ ಗಡಿ ದಾಟಿದ ಸಾವಿನ ಸಂಖ್ಯೆ

ಹೊಸದಿಲ್ಲಿ: ಕೋವಿಡ್ ಸೋಂಕಿನಿಂದ 11 ಮಂದಿ ಸಾವು, 100 ರ ಗಡಿ ದಾಟಿದ ಸಾವಿನ ಸಂಖ್ಯೆ

0

ಹೊಸದಿಲ್ಲಿ: ದೇಶಾದ್ಯಂತ ಕೋವಿಡ್ ಸೋಂಕಿನಿಂದ ಸೋಮವಾರ ಒಂದೇ ದಿನ 11 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ 2025ರ ಪ್ರಸ್ತುತ ಅಲೆಯಲ್ಲಿಯೇ ಸಾವಿನ ಸಂಖ್ಯೆ 100ರ ಗಡಿಯನ್ನು ದಾಟಿದೆ. ಈಗಾಗಲೇ ದೇಶದಲ್ಲಿ ಒಟ್ಟು 108 ಮಂದಿ ಈ ಅಲೆಯಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಈ 11 ಸಾವುಗಳಲ್ಲಿ ಕೇರಳ ರಾಜ್ಯದ ಅತಿ ಹೆಚ್ಚು ಅಂದರೆ, ಇಲ್ಲಿಯೇ ಏಳು ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ದೆಹಲಿ, ಮಹಾರಾಷ್ಟ್ರ, ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದಲ್ಲಿ ತಲಾ ಒಬ್ಬರಂತೆ ಸಾವಿಗೀಡಾಗಿದ್ದಾರೆ.
ಕೇರಳದಲ್ಲಿ ಸಾವಿಗೀಡಾದ ಎಲ್ಲಾ ವ್ಯಕ್ತಿಗಳೂ 60 ವರ್ಷ ಮೇಲ್ಪಟ್ಟವರಾಗಿದ್ದು, ಅವರಲ್ಲಿ ಬಹುತೇಕರಿಗೆ ಡಯಾಬಿಟೀಸ್, ಮೂತ್ರಕೋಶ ಸಮಸ್ಯೆ, ಪ್ಯಾಂಕ್ರಿಯಾಟೈಟಿಸ್ ಮತ್ತು ನ್ಯುಮೋನಿಯಾ ಇದ್ದಿದ್ದು ದೃಢಪಟ್ಟಿದೆ.

ದೆಹಲಿಯಲ್ಲಿ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 67 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, “ಈ ಅಲೆಯಲ್ಲಿನ ಸಾವುಗಳಲ್ಲಿ ಬಹುತೇಕರು ಹೃದಯಾಘಾತ, ಕಿಡ್ನಿ ವೈಫಲ್ಯ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಅಸ್ವಸ್ಥತೆಗಳಿಂದ ಬಳಲುತ್ತಿದ್ದವರು”. ಇದರಿಂದಾಗಿ ಸೋಂಕು ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ.

ಸಕ್ರಿಯ ಪ್ರಕರಣಗಳಲ್ಲಿ ಕೇರಳ ಮುಂಚೂಣಿಯಲ್ಲಿದೆ. ಪ್ರಸ್ತುತ ಕೇರಳದಲ್ಲಿ 1920 ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ಇತರ ರಾಜ್ಯಗಳಲ್ಲಿ : ಗುಜರಾತ್: 1433, ದೆಹಲಿ: 649, ಮಹಾರಾಷ್ಟ್ರ: 540. ಇದಲ್ಲದೆ ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣದಲ್ಲಿಯೂ ಕೆಲವು ಪ್ರಕರಣಗಳು ದಾಖಲಾಗುತ್ತಿದ್ದು, ಸೋಂಕಿನ ವ್ಯಾಪ್ತಿ ಹಬ್ಬುತ್ತಿರುವ ಸೂಚನೆ ನೀಡುತ್ತಿದೆ.

ಆರೋಗ್ಯ ಇಲಾಖೆ ಮತ್ತು ತಜ್ಞರು ಹಿರಿಯ ನಾಗರಿಕರು, ಪೂರ್ವ ಅಸ್ವಸ್ಥತೆ ಹೊಂದಿರುವವರು ಹಾಗೂ ಗರ್ಭಿಣಿಯರು ಹೆಚ್ಚು ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡುತ್ತಿದ್ದಾರೆ.