ಮನೆ ಕಾನೂನು ಕುತುಬ್ ಮಿನಾರ್‌ ಮಸೀದಿಯಲ್ಲಿ ನಮಾಜ್‌ಗೆ ತಡೆ ಪ್ರಶ್ನಿಸಿದ್ದಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ನಕಾರ

ಕುತುಬ್ ಮಿನಾರ್‌ ಮಸೀದಿಯಲ್ಲಿ ನಮಾಜ್‌ಗೆ ತಡೆ ಪ್ರಶ್ನಿಸಿದ್ದಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ನಕಾರ

0

ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಮೊಘಲ್ ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಿರುವುದನ್ನು ಪ್ರಶ್ನಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ಮನವಿಯನ್ನು ಆಲಿಸುವ ತುರ್ತು ಇಲ್ಲ ಎಂದು ನ್ಯಾಯಮೂರ್ತಿಗಳಾದ ಮನೋಜ್ ಕುಮಾರ್ ಓಹ್ರಿ ಮತ್ತು ಪೂನಂ ಬಂಬಾ ಅವರಿದ್ದ ರಜಾಕಾಲೀನ ಪೀಠ ಅಭಿಪ್ರಾಯಪಟ್ಟಿತು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೇ 6ರಂದು ಕೇವಲ ಐದು ಮಂದಿಗೆ ಮಸೀದಿಯಲ್ಲಿ ನಮಾಜ್‌ ಮಾಡಲು ಅನುಮತಿಸುವ ಮೂಲಕ ಪ್ರಾರ್ಥನೆಗೆ ಭಾಗಶಃ ತಡೆಯೊಡ್ಡಿತು. ನಂತರ, ಮೇ 13ರಂದು, ಅಧಿಕಾರಿಗಳು ಪ್ರಾರ್ಥನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರು ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಂ ಸುಫಿಯಾನ್ ಸಿದ್ದಿಕಿ ತಿಳಿಸಿದರು.

“ಯಾವುದೇ ಆದೇಶ ನೀಡದೆ ಮೌಖಿಕ ಸೂಚನೆಗಳ ಮೂಲಕವೇ ಜನರು ಪ್ರಾರ್ಥನೆಗೆ ತಡೆಯೊಡ್ಡಲಾಗಿದೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ. ಕಾನೂನಾತ್ಮಕ ಆಡಳಿತವನ್ನು ಎತ್ತಿಹಿಡಿದು ರಕ್ಷಿಸಬೇಕು” ಎಂದು ಸಿದ್ದಿಕಿ ಹೇಳಿದರು.

ಶುಕ್ರವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ವಿಪಿನ್ ಸಾಂಘಿ ಅವರಿದ್ದ ಪೀಠದೆದುರು ಅರ್ಜಿಯನ್ನು ಪ್ರಸ್ತಾಪಿಸಿದಾಗ ರಜೆಕಾಲೀನ ಪೀಠದೆದುರು ಮನವಿ ಸಲ್ಲಿಸುವಂತೆ ಪೀಠ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೊಘಲ್ ಮಸೀದಿಯು ದೆಹಲಿಯ ಮೊಘಲ್ ಉದ್ಯಾನದ ಎದುರು ಕುತುಬ್ ಸಂಕೀರ್ಣದ ಪ್ರವೇಶದ್ವಾರದಲ್ಲಿದೆ. ಕುತುಬ್ ಮಿನಾರ್ ಆವರಣದಲ್ಲಿರುವ ವಿವಾದಿತ ಕುವ್ವಾತ್-ಉಲ್-ಇಸ್ಲಾಂ ಮಸೀದಿಗೂ ಇದಕ್ಕೂ ಸಂಬಂಧವಿಲ್ಲ.

ಕುವ್ವಾತ್‌- ಉಲ್‌- ಇಸ್ಲಾಂ ಮಸೀದಿಯಲ್ಲಿ ಹಲವು ಹಿಂದೂ ದೇವತೆಗಳ ಪ್ರತಿಮೆಗಳಿವೆ ಎಂದು ವಿವಿಧ ಹಿಂದುತ್ವವಾದಿ ಗುಂಪುಗಳು ವಾದಿಸಿದ್ದು ಹಿಂದೂ ಮತ್ತು ಜೈನ ದೇಗುಲಗಳನ್ನು ಧ್ವಂಸಗೊಳಿಸಿ ಇದನ್ನು ನಿರ್ಮಿಸಲಾಗಿದೆ. ಹೀಗಾಗಿ ಅಲ್ಲಿ ತಮಗೆ ಪ್ರಾರ್ಥನೆ ಸಲ್ಲಿಸುವ ಹಕ್ಕು ನೀಡಬೇಕು ಎಂದು ಆಗ್ರಹಿಸಿದ್ದವು.