ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್’ಪಿಸಿ) ಸುಧಾರಿಸುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ಸ್ವೀಕರಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಎರಡೂ ಶಾಸನಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಸದನದಲ್ಲಿ ಹೊಸದಾಗಿ ಕರಡು ಮಂಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ಹರಿಯಾಣದ ಸೂರಜ್’ಕುಂಡ್’ನಲ್ಲಿ ನಡೆಯುತ್ತಿರುವ ಎರಡು ದಿನಗಳ ಚಿಂತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
“ಸಿಆರ್’ಪಿಸಿ ಮತ್ತು ಐಪಿಸಿ ಸುಧಾರಣೆ ಕುರಿತು ಸಾಕಷ್ಟು ಸಲಹೆಗಳನ್ನು ಸ್ವೀಕರಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಸಮಯ ವಿನಿಯೋಗಿಸಿದ್ದು, ಆಳವಾಗಿ ಅಧ್ಯಯನ ಮಾಡಲಾಗುತ್ತಿದೆ. ಸದನದಲ್ಲಿ ಶೀಘ್ರದಲ್ಲೇ ಸಿಆರ್’ಪಿಸಿ, ಐಪಿಸಿಗೆ ಸಂಬಂಧಿಸಿದಂತೆ ನೂತನ ಕರಡು ಮಂಡಿಸಲಾಗುವುದು” ಎಂದು ಶಾ ಹೇಳಿದ್ದಾರೆ.
ಪ್ರತಿ ರಾಜ್ಯದಲ್ಲೂ ರಾಷ್ಟ್ರೀಯ ತನಿಖಾ ಸಂಸ್ಥೆ ಘಟಕ ಆರಂಭಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಅಮಿತ್ ಶಾ ಹೇಳಿದರು.
ಭಾರತದಲ್ಲಿ ಕ್ರಿಮಿನಲ್ ಕಾನೂನು ಸುಧಾರಣೆ ಶಿಫಾರಸ್ಸು ಮಾಡುವಂತೆ ಗೃಹ ಸಚಿವರು 2020ರ ಮೇನಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ದೆಹಲಿಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಣಬೀರ್ ಸಿಂಗ್ ಅವರು ಸಮಿತಿಯ ನೇತೃತ್ವ ವಹಿಸಿದ್ದಾರೆ.
ಸಮಿತಿ ರಚಿಸಿದಾಗ ವೈವಿಧ್ಯತೆ ಮತ್ತು ಪಾರದರ್ಶಕತೆ ಕೊರತೆಯ ಹಿನ್ನೆಲೆಯಲ್ಲಿ ವಕೀಲರು, ನಿವೃತ್ತ ನ್ಯಾಯಮೂರ್ತಿಗಳು, ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಸಮಿತಿಯು ಎಲ್ಲಾ ರೀತಿಯ ಅಭಿಪ್ರಾಯ ಮತ್ತು ಸಲಹೆಗಳನ್ನು ಗೌರವಿಸುವುದಾಗಿ ಹೇಳಿತ್ತು. ಪಾರದರ್ಶಕತೆಯ ದೃಷ್ಟಿಯಿಂದ ಎಲ್ಲಾ ರೀತಿಯ ಮಾಹಿತಿಯನ್ನು ವೆಬ್’ಸೈಟ್’ನಲ್ಲಿ ಪ್ರಕಟಿಸುವುದಾಗಿ ಹೇಳಿತ್ತು.