ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಚಾಟ್ ಜಿಪಿಟಿಯಂತಹ ಎಐ ಟೂಲ್ ಗಳ ಕುರಿತು ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಕೆಲವರು ಇದೊಂದು ಅತ್ಯದ್ಭುತ ಕಲ್ಪನೆ ಎಂದರೆ ಇನ್ನೂ ಕೆಲವರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹಲವರಂತೂ ಈ ಅತ್ಯದ್ಭುತ ಸೇವೆಗಳಿಗೆ ಮಾರುಹೋಗಿದ್ದು, ಇವುಗಳ ಸಹಾಯವಿಲ್ಲದಿದ್ದರೆ ಕೆಲಸವೇ ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಅವಲಂಬಿತವಾಗಿದ್ದಾರೆ. OpenAI ನ ಚಾಟ್ಜಿಪಿಟಿಯಿಂದ (CHatGPT) ಹಿಡಿದು ಮೈಕ್ರೋಸಾಫ್ಟ್ ನ ಹೊಸ ಬಿಂಗ್ ಮತ್ತು ಗೂಗಲ್ ಬಾರ್ಡ್ ವರೆಗೆ, ಎಐ ಚಾಟ್ ಬಾಟ್ ಗಳು ಅಸ್ತಿತ್ವದಲ್ಲಿದ್ದು, ಜನರು ಈ ಪರಿಕರಗಳನ್ನು ಮೊದಲಿಗಿಂತ ಈಗ ಹೆಚ್ಚು ವ್ಯಾಪಕವಾಗಿ ಬಳಸಲು ಪ್ರಾರಂಭಿಸಿದ್ದಾರೆ.
ಚಾಟ್ ಜಿಪಿಟಿಯಂತೂ ಕೆಲ ತಿಂಗಳಿನಿಂದ ವಿಶ್ವದಲ್ಲಿ ಮೋಡಿ ಮಾಡುತ್ತಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಪ್ರಾರಂಭವಾದ ಈ ಚಾಟ್ ಬಾಟ್ ಗಳು ಹೊಸ ಕ್ರಾಂತಿಯನ್ನೇ ಮಾಡುತ್ತಿದೆ.
ಬಳಕೆದಾರರು ಕವಿತೆಗಳನ್ನು ರಚಿಸಲು, ಪ್ರಬಂಧಗಳನ್ನು ಬರೆಯಲು, ಮಾಹಿತಿಯನ್ನು ಹುಡುಕಲು ನೇರವಾಗಿ ಚಾಟ್ ಜಿಪಿಟಿ ಮತ್ತು ಇತರ AI ನಂತಹ ಪರಿಕರಗಳ ಮೊರೆ ಹೋಗುತ್ತಿದ್ದಾರೆ.
ಅದ್ಭುತ ಪ್ಯಾಕೇಜ್ ಗಳೊಂದಿಗೆ ಉದ್ಯೋಗ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಚಾಟ್ ಜಿಪಿಟಿಯಂತಹ ಎಐ ಟೂಲ್ ಗಳ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿರುವಂತಹ ವಿಚಾರ. ಆದರೆ ಈ ಸೇವೆಗಳು ಪ್ರಸ್ತುತ ಉದ್ಯೋಗ ಕ್ಷೇತ್ರದಲ್ಲೂ ಸಹ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿವೆ. ಈ ಕ್ಷೇತ್ರ ಕೇವಲ ಜನಪ್ರಿಯವಲ್ಲ, ಯಾರೂ ಊಹಿಸದ ವೇತನ ಪ್ಯಾಕೇಜ್ ಗಳೊಂದಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಕೆಲ ವರದಿಗಳು ತಿಳಿಸುತ್ತಿವೆ.
ಹೌದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಚಾಟ್ಜಿಪಿಟಿಯಂತಹ ಟೂಲ್ ಗಳ ಬಳಕೆ ಹೆಚ್ಚುತ್ತಿದ್ದಂತೆ, ಕ್ಷೇತ್ರದಲ್ಲಿ ಪ್ರಾಂಪ್ಟ್ ಇಂಜಿನಿಯರ್ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
AI ಚಾಟ್ ಬಾಟ್ ಗಳು ಬಹುತೇಕ ಎಲ್ಲವನ್ನೂ ಬಳಕೆದಾರರಿಗೆ ನೀಡುತ್ತವೆ. ಆದಾಗ್ಯೂ ಪ್ರಶ್ನೆಗಳನ್ನು ಕೇಳಿ ಮತ್ತು ಫಲಿತಾಂಶಗಳಿಗೆ ಕಾರಣವಾಗುವ ಪ್ರಾಂಪ್ಟ್ ಗಳನ್ನು ಬರೆಯುವಲ್ಲಿ ಇವು ಇನ್ನೂ ಸುಧಾರಣೆ ಹೊಂದಿಲ್ಲ. ಆದ್ದರಿಂದ ಪ್ರಾಂಪ್ಟ್ ಗಳನ್ನು ಬರೆಯುವಲ್ಲಿ ಪರಿಣಿತರಾಗಿರುವವರನ್ನು ಈಗಾಗಲೇ ಕಂಪೆನಿ ನೇಮಿಸಿಕೊಳ್ಳಲು ಆರಂಭಿಸಿದೆ.
ಪ್ರಾಂಪ್ಟ್ ಇಂಜಿನಿಯರ್ ಗಳಿಗೆ ಫುಲ್ ಡಿಮ್ಯಾಂಡ್, ಸಂಬಳ 2.7 ಕೋಟಿ
ಸ್ಯಾನ್ ಫ್ರಾನ್ಸಿಸ್ಕೋ ಮೂಲದ AI ಸ್ಟಾರ್ಟಪ್ ಆಂಥ್ರೊಪಿಕ್ ಪ್ರಾಂಪ್ಟ್ ಇಂಜಿನಿಯರ್ ಮತ್ತು ಲೈಬ್ರರಿಯನ್ ಅನ್ನು ವರ್ಷಕ್ಕೆ USD 335,000 ವರೆಗೆ ಸಂಬಳದೊಂದಿಗೆ, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ 2.7 ಕೋಟಿ ರೂ ಸಂಬಳದೊಂದಿಗೆ ನೇಮಕ ಮಾಡಿಕೊಳ್ಳುತ್ತಿದೆ.
ಪ್ರಾಂಪ್ಟ್ ಇಂಜಿನಿಯರ್ ಕೆಲಸ ಏನು?
ಪ್ರಾಂಪ್ಟ್ ಇಂಜಿನಿಯರ್ AI ಪರಿಕರಗಳು ಮತ್ತು ಚಾಟ್ಬಾಟ್ಗಳಿಗೆ ತಮ್ಮ ಉತ್ತರಗಳನ್ನು ಪರೀಕ್ಷಿಸಲು ಮತ್ತು ಸುಧಾರಿಸಲು ಪ್ರಶ್ನೆಗಳನ್ನು ಬರೆಯುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇಲ್ಲಿ ಕೆಲಸ ಮಾಡಲು ಎಂಜಿನಿಯರಿಂಗ್ ಪದವಿ ಅಥವಾ STEM ಹಿನ್ನೆಲೆ ಹೊಂದಿರಬೇಕು ಅಂತಿಲ್ಲ.
ಅಂದರೆ ನೀವು ತಾಂತ್ರಿಕ ಹಿನ್ನೆಲೆಯನ್ನು ಹೊಂದಿರದಿದ್ದರೂ ಕೆಲ ಕೌಶಲ್ಯಗಳೊಂದಿಗೆ ನೀವು ಇಲ್ಲಿ ಕೆಲಸ ಮಾಡಬಹುದು. ಇಲ್ಲಿ ಕೆಲಸ ಮಾಡಲು ಕೋಡಿಂಗ್ ಭಾಷೆಯ ಅಗತ್ಯವಿರುವುದಿಲ್ಲ, ಬದಲಿಗೆ ಪ್ರಾಂಪ್ಟ್ ಎಂಜಿನಿಯರ್ ಗಳು ಯೋಗ್ಯ ಮಟ್ಟದ ಭಾಷೆ ಮತ್ತು ವ್ಯಾಕರಣ ಕೌಶಲ್ಯಗಳು, ಡೇಟಾ ವಿಶ್ಲೇಷಣೆ ಮತ್ತು ವಿಮರ್ಶಾತ್ಮಕ ಚಿಂತನೆಯ ಸ್ಕಿಲ್ ಗಳನ್ನು ಹೊಂದಿರಬೇಕಾಗುತ್ತದೆ.
ಪ್ರಾಂಪ್ಟ್ ಇಂಜಿನಿಯರ್ ಗಳ ಅವಶ್ಯಕತೆ ಇದ್ದು, ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಓಪನ್ AI CEO, ಸ್ಯಾಮ್ ಆಲ್ಟ್ ಮ್ಯಾನ್ ಫೆಬ್ರವರಿಯಲ್ಲಿ ಹೇಳಿದ್ದರು. ಹೀಗಾಗಿ ದೊಡ್ಡ ಮೊತ್ತದ ಪ್ಯಾಕೇಜ್ ಪಡೆಯಲು ಕೌಶಲ್ಯ, ಆಸಕ್ತಿ ಇರುವವರು ಕಂಪೆನಿಯು ನೇಮಕಾತಿ ಹೊರಡಿಸುತ್ತಿದ್ದಂತೆ ಅರ್ಜಿ ಸಲ್ಲಿಸಬಹುದು.
ಚಾಟ್ ಜಿಪಿಟಿಯಂತಹ ಸೇವೆಗಳು ಜನರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ ಎಂದು ಈಗಾಗಲೇ ಈ ಸೇವೆಗೆ ಹೆಚ್ಚು ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಇಷ್ಟು ದೊಡ್ಡ ಮೊತ್ತದ ಉದ್ಯೋಗ ಸೃಷ್ಟಿ ಆ ಎಲ್ಲಾ ವಾದ, ಟೀಕೆಗಳಿಗೆ ಅಂತ್ಯ ಹಾಕಿದೆ ಅಂತ ಹೇಳ್ಬಹುದು..