ಮನೆ ಕಾನೂನು ಬಿಬಿಎಂಪಿ ವ್ಯಾಪ್ತಿಯ 205 ಕೆರೆಗಳ ನಿರ್ವಹಣೆ ಖಾಸಗಿಯವರಿಗೆ ವಹಿಸಲು ನೂತನ ನೀತಿ: ಹೈಕೋರ್ಟ್‌ ಗೆ ಸರ್ಕಾರದ...

ಬಿಬಿಎಂಪಿ ವ್ಯಾಪ್ತಿಯ 205 ಕೆರೆಗಳ ನಿರ್ವಹಣೆ ಖಾಸಗಿಯವರಿಗೆ ವಹಿಸಲು ನೂತನ ನೀತಿ: ಹೈಕೋರ್ಟ್‌ ಗೆ ಸರ್ಕಾರದ ಮಾಹಿತಿ

0

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 205 ಕೆರೆಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ನಿಟ್ಟಿನಲ್ಲಿ ನೀತಿಯೊಂದನ್ನು ರೂಪಿಸಲಾಗಿದೆ ಎಂದು ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

Join Our Whatsapp Group

ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ, ಕೆರೆ ಜಾಗಗಳ ಒತ್ತುವರಿ ತೆರವುಗೊಳಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಕೋರಿ ಸಿಟಿಜಲ್ ಆ್ಯಕ್ಷನ್ ಗ್ರೂಪ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 205 ಕೆರೆಗಳಿವೆ. ಅವುಗಳ ನಿರ್ವಹಣೆಗೆ ಪಾಲಿಕೆಗೆ ವಾರ್ಷಿಕ ಅಂದಾಜು ₹30 ಕೋಟಿ ಬೇಕು. ಇಷ್ಟೊಂದು ದೊಡ್ಡ ಮೊತ್ತವನ್ನು ಪ್ರತಿ ವರ್ಷವೂ ಹೊಂದಿಸುವುದು ಕಷ್ಟವಾಗಲಿದೆ. ಆದ್ದರಿಂದ, ಕೆರೆಗಳ ನಿರ್ವಹಣೆಯನ್ನು ಸ್ಥಳೀಯ ನಿವಾಸಿಗಳ ಸಂಘಗಳು, ಸಹಕಾರ ಸಂಘಗಳು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು (ಎನ್ ಜಿಒ), ಕಾರ್ಪೋರೆಟ್ ಕಂಪೆನಿಗಳಿಗೆ ವಹಿಸುವ ಸಂಬಂಧ ನೀತಿ ರೂಪಿಸಲಾಗಿದೆ. ಕೆರೆಗಳ ಮಾಲೀಕತ್ವ, ಮೇಲ್ವಿಚಾರಣೆ ಸರ್ಕಾರ ಮತ್ತು ಪಾಲಿಕೆಯದ್ದೇ ಆಗಿರಲಿದೆ. ಯಾವುದೇ ಕಾರಣಕ್ಕೂ ಮಾಲೀಕತ್ವವನ್ನು ಖಾಸಗಿಯವರಿಗೆ ಬಿಟ್ಟುಕೊಡುವುದಿಲ್ಲ. ಅವರು ಕೆರೆ ನಿರ್ವಹಣೆ ಮತ್ತು ಅಭಿವದ್ಧಿಗೆ ಹಣ ಖರ್ಚು ಮಾಡಲಿದ್ದಾರೆ. ಈ ವಿಷಯದಲ್ಲಿ ಆಸಕ್ತರ ಅಭಿಪ್ರಾಯ ಪಡೆಯಲಾಗುವುದು, ಸರ್ಕಾರದ ಷರತ್ತುಗಳನ್ನು ಒಪ್ಪಿಕೊಂಡವರಿಗೆ ನಿರ್ವಹಣೆಯ ಜವಾಬ್ದಾರಿ ವಹಿಸಲಾಗುವುದು” ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ವಕೀಲೆ ಜಯ್ನಾ ಕೊಠಾರಿ ಹಾಗೂ ವಕೀಲ ಜಿ ಆರ್ ಮೋಹನ್ ಅವರು “ಸ್ಥಳೀಯ ನಿವಾಸಿಗಳ ಸಂಘಗಳು, ಕೆರೆಯ ಅಕ್ಕಪಕ್ಕದ ನಿವಾಸಿಗಳಿಗೆ ಕೆರೆ ನಿರ್ವಹಣೆ ಜವಾಬ್ದಾರಿ ವಹಿಸಲು ನಮ್ಮ ಆಕ್ಷೇಪವೇನೂ ಇಲ್ಲ. ಆದರೆ, ಕಾರ್ಪೋರೇಟ್ ಕಂಪೆನಿಗಳ ವಿಚಾರದಲ್ಲಿ ಕೆಲವು ಅನುಮಾನಗಳಿವೆ. ಅಂತಿಮವಾಗಿ ನಗರದ ಕೆರೆಗಳು ಉಳಿಯಬೇಕು ಎಂಬುದಷ್ಟೇ ನಮ್ಮ ಉದ್ದೇಶ” ಎಂದರು.

ಆಗ ಶಶಿಕಿರಣ್ ಶೆಟ್ಟಿ ಅವರು “ಕೆರೆಗಳ ಉಳಿವಿಗೆ ಕಾರ್ಪೋರೇಟ್ ಕಂಪೆನಿಗಳ ನೆರವು ಅಗತ್ಯವಿದೆ. ನಿರ್ವಹಣೆಗೆ ಹಣ ಬೇಕು. ಈ ವಿಷಯದಲ್ಲಿ ಅರ್ಜಿದಾರರು ಯಾವುದೇ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ. ಕೆರೆಗಳು ಉಳಿಯಬೇಕು ಎಂಬುದು ಸರ್ಕಾರದ ಉದ್ದೇಶವೂ ಆಗಿದೆ. ಎಲ್ಲವನ್ನೂ ನೀತಿಯಲ್ಲಿ ವಿವರಿಸಲಾಗಿದೆ. ಅಂತೆಯೇ, ಅರ್ಜಿದಾರರ ಬಳಿ ಸೂಕ್ತ ಸಲಹೆಗಳಿದ್ದರೆ ಅವುಗಳನ್ನು ಸ್ವೀಕರಿಸಿ ನಿಯಮಾನುಸಾರ ಅಳವಡಿಸಿಕೊಳ್ಳಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ” ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು “ಸರ್ಕಾರದ ನೀತಿಗೆ ಪೂರಕವಾದ ಸಲಹೆಗಳಿದ್ದರೆ ಅರ್ಜಿದಾರರು ಸರ್ಕಾರ ಮತ್ತು ಪಾಲಿಕೆಗೆ ಅವುಗಳನ್ನು ಸಲ್ಲಿಸಬಹುದು” ಎಂದು ಸೂಚಿಸಿ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿತು.