ಬೆಂಗಳೂರು: ರಾಜ್ಯದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಆಗಾಗ ಗಲಾಟೆಗಳು ಆಗುತ್ತದೆ. ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡುವುದಿಲ್ಲ, ಅಂಗಡಿ- ಹೋಟೆಲ್‌ಗಳಲ್ಲಿ ಕನ್ನಡಿ ಮಾತನಾಡುವ ಬಗ್ಗೆ ಸಂಘರ್ಷ ಹೀಗೆ ಒಂದೆಲ್ಲಾ ಒಂದು ಸಮಸ್ಯೆ ಆಗುತ್ತಿರುತ್ತದೆ. ಇದೀಗ ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಬಳಸುವಂತೆ ಮಹತ್ವದ ಆದೇಶ ನೀಡಿದ್ದು, ಸಂಪೂರ್ಣವಾಗಿ ಕನ್ನಡವನ್ನ ಬಳಕೆ ಮಾಡಬೇಕು ಎದು ಆದೇಶ ನೀಡಿದೆ.
ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹಾರ ಮಾಡಬೇಕು
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಇರಬೇಕು ಎಂದು ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ 1963ರಲ್ಲಿ ಇದೆ. ಹಾಗಾಗಿ ಸರ್ಕಾರಿ ಕಚೇರಿಗಳಲ್ಲಿ ಕನ್ನಡವನ್ನ ಬಳಸಬೇಕು. ಅದರಲ್ಲೂ ಕನ್ನಡದಲ್ಲಿ ಬರುವ ಅರ್ಜಿ ಮತ್ತು ಪತ್ರಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಉತ್ತರ ನೀಡಬೇಕು, ಮುಖ್ಯವಾಗಿ ಸರ್ಕಾರಿ ಕಚೇರಿಗಳ ಬೋರ್ಡ್‌ಗಳು ಕನ್ನಡದಲ್ಲಿಯೇ ಇರಬೇಕು ಎಂದು ಆದೇಶ ನೀಡಿದ್ದಾರೆ.
ಇನ್ನು ಇದಿಷ್ಟೇ ಅಲ್ಲದೇ, ವಿಧಾನ ಮಂಡಲಗಳಲ್ಲಿ ನಡೆಯುವ ಕಾರ್ಯಕಲಾಪಗಳು, ಪತ್ರ ವ್ಯವಹಾರ ಹಾಗೂ ಯಾವುದೇ ಸರ್ಕಾರಿ ಸೂಚನೆಗಳನ್ನ ನೀಡುವಾಗ ಕನ್ನಡವನ್ನ ಬಳಕೆ ಮಾಡಬೇಕು. ಹೊಸ ನೇಮಕಾತಿ, ಅಧಿಕಾರಿಗಳ ವರ್ಗಾವಣೆ ಮತ್ತು ರಜೆ ಕೊಡುವಾಗ ಸಹ ಅವುಗಳನ್ನ ಕನ್ನಡದಲ್ಲಿಯೇ ಬರೆಯಬೇಕು. ಈಗಾಗಲೇ ಕಚೇರಿಗಳಲ್ಲಿ ಇರುವ ಇಂಗ್ಲೀಷ್ ಭಾಷೆಯ ದಾಖಲೆ ಹಾಗೂ ಪುಸ್ತಕಗಳ ಜಾಗದಲ್ಲಿ ಕನ್ನಡ ಪುಸ್ತಕಗಳು ಬರಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಕಚೇರಿಗಳ ನಡುವೆ ನಡೆಯುವ ಪತ್ರ ವ್ಯವಹಾರ, ಸಭೆಯಲ್ಲಿ ಚರ್ಚಿಸಿದ ವಿಚಾರಗಳ ಬಗ್ಗೆ ನೀಡುವ ಮಾಹಿತಿ ಇರಬಹುದು ಒಟ್ಟಾರೆ ಎಲ್ಲವನ್ನೂ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ಹೇಳಲಾಗಿದೆ.
ಈಗಾಗಲೇ ಆದೇಶಸಿದ್ದರೂ ಸರಿಯಾಗಿ ಪಾಲನೆ ಆಗಿರಲಿಲ್ಲ
ಕನ್ನಡ ಭಾಷೆಯಲ್ಲಿಯೇ ಆಡಳಿತದ ಎಲ್ಲಾ ಕೆಲಸಗಳು ಆಗಬೇಕು ಎಂದು ಈಗಾಗಲೇ ಸರ್ಕಾರ ಆದೇಶ ನೀಡಿತ್ತು, ಆದರೆ ಇದರ ಪಾಲನೆ ಮಾತ್ರ ಸರಿಯಾಗಿ ಆಗಿರಲಿಲ್ಲ. ಇದನ್ನ ಗಮನಿಸಿದ ಸಿಎಂ ಕೆಲ ಪತ್ರಗಳು ಕನ್ನಡದಲ್ಲಿ ಬರದ ಕಾರಣ ಅದನ್ನ ವಾಪಾಸ್ ಕಳುಹಿಸಿದ್ದು, ಇನ್ನು ಮುಂದೆ ಈ ನಿಯಮವನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಉಲ್ಲಂಘಿಸಿದವರ ವಿರುದ್ಧ ವೈಯಕ್ತಿಕವಾಗಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.














