ರಾಮ್ ಚರಣ್ ಅಭಿನಯದ ಹಾಗೂ ಬುಚ್ಚಿ ಬಾಬು ಸನಾ ನಿರ್ದೇಶನದ ಬಹು ನಿರೀಕ್ಷಿತ ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ‘ಪೆದ್ದಿ’ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಬಿಡುಗಡೆಯಾದ ಐದು ದಿನಗಳಲ್ಲೇ ವಿಶ್ವಾದ್ಯಂತ 248.92 ಕೋಟಿ ರೂ. ಗಳಿಕೆ ದಾಖಲಿಸಿರುವ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲಿ ಮಾತ್ರವೇ ಚಿತ್ರ 169.70 ಕೋಟಿ ರೂ. ನೆಟ್ ಕಲೆಕ್ಷನ್ ಗಳಿಸಿದೆ.
ಆದರೆ ಚಿತ್ರದ ಯಶಸ್ಸಿನ ನಡುವೆಯೇ ಇದೀಗ ಕಾನೂನು ವಿವಾದವೂ ತಲೆದೋರಿದೆ. ಚಿತ್ರದ ವಿರುದ್ಧ ಬುಡಕಟ್ಟು ಸಮುದಾಯದ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ದೂರು ದಾಖಲಿಸಿದ್ದಾರೆ.

ಅಟ್ರಾಸಿಟಿ ಪ್ರಕರಣ ದಾಖಲಿಸುವಂತೆ ಒತ್ತಾಯ
ಆಂಧ್ರಪ್ರದೇಶದ ಮಾನ್ಯಂ ಹಾಗೂ ವಿಜಯನಗರಂ ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯದ ನಾಯಕರು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಚಿತ್ರದಲ್ಲಿ ತಮ್ಮ ಸಮುದಾಯವನ್ನು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸಿನಿಮಾದ ಕೆಲವು ಸಂಭಾಷಣೆಗಳು ಹಾಗೂ ದೃಶ್ಯಗಳು ಬುಡಕಟ್ಟು ಜನರು ಮತ್ತು ಅವರ ಸಂಸ್ಕೃತಿಯನ್ನು ಕೀಳಾಗಿ ಬಿಂಬಿಸುವಂತಿವೆ. ಇದರಿಂದ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಚಿತ್ರತಂಡದ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಅವರು ಆಗ್ರಹಿಸಿದ್ದಾರೆ. ದೂರು ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕ್ರಮದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಚಿತ್ರದ ವಿರುದ್ಧ ಕೇಳಿಬಂದಿರುವ ಈ ಆರೋಪಗಳು ಇದೀಗ ಸಿನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಚಿತ್ರತಂಡದ ಪ್ರತಿಕ್ರಿಯೆಗಾಗಿ ಎಲ್ಲರೂ ಕಾಯುತ್ತಿದ್ದಾರೆ.














