ಬೆಂಗಳೂರು/ಮೈಸೂರು : ಹೊಸ ವರ್ಷದ ಮೊದಲ ದಿನವಾದ ಇಂದು ರಾಜ್ಯದ ಎಲ್ಲೆಡೆ ಜನರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಬೆಂಗಳೂರಿನ ಬನಶಂಕರಿ ದೇವಾಲಯಕ್ಕೆ ಭಕ್ತರ ದಂಡೇ ಆಗಮಿಸುತ್ತಿದೆ.
ಬೆಳಗ್ಗೆ 4 ಗಂಟೆಯಿಂದಲೇ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ವಿಶೇಷ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ. ನಗರದ ಟಟಿಡಿ ದೇವಸ್ಥಾನದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಅಪಾರ ಸಂಖ್ಯೆಯ ಭಕ್ತರು ಬಂದಿದ್ದಾರೆ. ಹೊಸ ವರ್ಷದ ಮೊದಲ ದಿನ ತಾಯಿ ಚಾಮುಂಡಿ ದರ್ಶನ ಮಾಡಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಹೀಗಾಗಿ, ಅಪಾರ ಸಂಖ್ಯೆಯ ಭಕ್ತರು ಇವತ್ತು ಬೆಳಗ್ಗೆಯಿಂದಲೇ ತಾಯಿ ಚಾಮುಂಡಿ ದರ್ಶನ ಮಾಡುತ್ತಿದ್ದಾರೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.
ಕಲಬುರಗಿಯ ಶ್ರೀ ಶರಣಬಸವೇಶ್ವರರ ದೇವಸ್ಥಾನಕ್ಕೆ ಭಕ್ತರ ದಂಡು ಆಗಮಿಸಿದ್ದು, ಶರಣನ ದರ್ಶನ ಪಡೆದು ಹೊಸ ವರ್ಷವನ್ನು ಕಲಬುರಗಿಯ ಜನ ಆಚರಿಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ದೇವಸ್ಥಾನದ ಎದುರಿಗೆ ಸರದಿ ಸಾಲಿನಲ್ಲಿ ನಿಂತು ಶರಣನ ದರ್ಶನವನ್ನ ಭಕ್ತರು ಪಡೆಯುತ್ತಿದ್ದಾರೆ.















