ಬೆಂಗಳೂರು: ಆರ್.ಆರ್.ನಗರದಲ್ಲಿ 20 ದಿನಗಳ ನವಜಾತ ಶಿಶು ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದ ಏಜೆಂಟ್ ಆಗಿದ್ದ ಮಹಿಳಾ ಆರೋಪಿ ರಮ್ಯಾಳನ್ನು ಹೆಬ್ಬಾಳದಲ್ಲಿ ಹಾಗೂ ರಾಜಾಜಿನಗರದಲ್ಲಿ ನಕಲಿ ವೈದ್ಯ ಕೆವಿನ್ ನನ್ನು ಅರೆಸ್ಟ್ ಮಾಡಲಾಗಿದೆ.
ಹಸುಗೂಸು ಮಾರಾಟ ಗ್ಯಾಂಗ್ ಗೆ ಮಗುವನ್ನು ಮಾರಿದ್ದ ರಮ್ಯಾಳನ್ನು ಹೆಬ್ಬಾಳದಲ್ಲಿ ಬಂಧಿಸಲಾಗಿದೆ. ರಮ್ಯಾಳ ಸಂಬಂಧಿ ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದಳು. ಅಬಾರ್ಷನ್ ಗೆ ಓಡಾಡುತ್ತಿದ್ದ ಯುವತಿಯನ್ನು ರಮ್ಯಾ ಆರೈಕೆ ಮಾಡಿದ್ದಳು. ಆಕೆಯನ್ನು 9 ತಿಂಗಳು ಜೋಪಾನ ಮಾಡಿ ಮಗುವನ್ನು ಪಡೆದುಕೊಂಡಿದ್ದಳು. ಬಳಿಕ ಇದೇ ಗ್ಯಾಂಗ್ ಜೊತೆ ಸೇರಿ ಮಗುವನ್ನು ಮಾರಾಟ ಮಾಡಿದ್ದಳು. ಮಗು ಹೆತ್ತುಕೊಟ್ಟಿದ್ದಕ್ಕೆ ಸಂಬಂಧಿ ಯುವತಿಗೆ ರಮ್ಯಾ ಹಣ ನೀಡಿದ್ದಳು. ನಂತರ ಹೊಸ ವರನನ್ನು ನೋಡಿ ಯುವತಿಗೆ ಮದುವೆ ಕೂಡ ಮಾಡಿಸಿದ್ದಳು. ಸದ್ಯ ಮಗು ಮಾರಾಟ ಕೇಸ್ ನಲ್ಲಿ ಇತರೆ ಆರೋಪಿಗಳು ರಮ್ಯಾಳ ಹೆಸರು ಬಾಯ್ಬಿಟ್ಟಿದ್ದರು. ಹೆಬ್ಬಾಳದಲ್ಲಿ ರಮ್ಯಾಳನ್ನ ಅರೆಸ್ಟ್ ಮಾಡಲಾಗಿದೆ. ಇದೀಗ ಈ ಪ್ರಕರಣದಲ್ಲಿ ಒಟ್ಟಾರೆಯಾಗಿ 11 ಆರೋಪಿಗಳನ್ನು ಬಂಧಿಸಲಾಗಿದೆ. ಮೊದಲು ಅರೆಸ್ಟ್ ಆದ ನಾಲ್ವರು ಆರೋಪಿಗಳನ್ನ ಜೈಲಿಂದ ಕಸ್ಟಡಿಗೆ ಪಡೆದುಕೊಳ್ಳಲು ಸಿಸಿಬಿ ತಯಾರಿ ನಡೆಸಿದೆ.
ಇನ್ನು ಬೆಂಗಳೂರಿನಲ್ಲಿ ಹಸುಗೂಸುಗಳ ಮಾರಾಟ ಜಾಲ ಪತ್ತೆ ಪ್ರಕರಣ ಸಂಬಂಧ ಓರ್ವ ನಕಲಿ ವೈದ್ಯನನ್ನು ಸಿಸಿಬಿ ಪೊಲೀಸರು ರಾಜಾಜಿನಗರದಲ್ಲಿ ಬಂಧಿಸಿದ್ದಾರೆ. ಎಂಬಿಬಿಎಸ್ ಉತ್ತೀರ್ಣ ಆಗದಿದ್ರೂ ನಕಲಿ ವೈದ್ಯ ಕೆವಿನ್ ಕ್ಲಿನಿಕ್ ನಡೆಸುತ್ತಿದ್ದ. ಡಾಕ್ಟರ್ ಕೆವಿನ್ ಅಂತಾ ಬೋರ್ಡ್ ಹಾಕಿಕೊಂಡಿದ್ದ. ಅಲ್ಲದೆ ರೋಗಿಗಳಿಗೆ ಟ್ರೀಟ್ ಮೆಂಟ್ ಸಹ ನೀಡುತ್ತಿದ್ದ. ಕೆವಿನ್ ಹಸುಗೂಸು ಮಾರಾಟ ಮಾಡಿದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.