ಮನೆ ಅಪರಾಧ ನವವಿವಾಹಿತೆ ಆತ್ಮಹತ್ಯೆ ಪ್ರಕರಣ – ಈಗ ಪತಿಯೂ ಸೂಸೈಡ್‌, ಅತ್ತೆ ಗಂಭೀರ..!

ನವವಿವಾಹಿತೆ ಆತ್ಮಹತ್ಯೆ ಪ್ರಕರಣ – ಈಗ ಪತಿಯೂ ಸೂಸೈಡ್‌, ಅತ್ತೆ ಗಂಭೀರ..!

0

ಬೆಂಗಳೂರು : ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಗಾನವಿ ಪತಿ ಸೂರಜ್ ಆತ್ಮಹತ್ಯೆ ಮಾಡಿಕೊಂಡರೆ ಅತ್ತೆ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಾನವಿ ಆತ್ಮಹತ್ಯೆಯ ಬಳಿಕ ಸೂರಜ್‌, ಜಯಂತಿ, ಸೂರಜ್‌ ಸಹೋದರ ಸಂಜಯ್‌ ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿದ್ದರು. ಖಾಸಗಿ ಹೋಟೆಲಿನಲ್ಲಿ ಸೂರಜ್‌ ಆತ್ಮಹತ್ಯೆ ಮಾಡಿಕೊಂಡರೆ, ಆತ್ಮಹತ್ಯೆಗೆ ಯತ್ನಿಸಿದ ಜಯಂತಿ ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಶುಕ್ರವಾರ (ಡಿ.26) ಸಂಜೆ ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ಹೋಟೆಲ್ ಸಿಬ್ಬಂದಿ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ. ಯಾವುದೇ ಡೆತ್ ನೋಟ್ ಅಥವಾ ಪೋನಿನಲ್ಲಿ ಯಾವುದೇ ಮೆಸೇಜ್ ಪತ್ತೆಯಾಗಿಲ್ಲ. ನಾಗ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು ಸ್ಥಳೀಯ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. ಶ್ರೀಲಂಕಾಗೆ ಹನಿಮೂನ್‌ಗೆ ತೆರಳಿದ್ದಾಗ ವಿವಾಹಕ್ಕೂ ಮುನ್ನ ಬೇರೊಬ್ಬನ ಜೊತೆ ಗಾನವಿಗೆ ಸಂಬಂಧ ಇದ್ದ ವಿಚಾರ ಸೂರಜ್‌ಗೆ ಗೊತ್ತಾಗಿ ದಂಪತಿ ಮಧ್ಯೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತೆರಳಿ ಜೋಡಿ ಅರ್ಧದಲ್ಲೇ ಬೆಂಗಳೂರಿಗೆ ವಾಪಸ್‌ ಆಗಿತ್ತು.

ಗಾನವಿ ಬೆಂಗಳೂರಿಗೆ ಮರಳಿದ್ದರೂ ಬೇರೊಬ್ಬನ ಜೊತೆ ವಿವಾಹ ಪೂರ್ವ ಸಂಬಂಧ ಇದ್ದ ಕಾರಣ ಆಕೆಯನ್ನು ಸೂರಜ್‌ ಕುಟುಂಬ ಸ್ವೀಕರಿಸಲಿಲ್ಲ. ಸೂರಜ್‌ ಕುಟುಂಬದಿಂದ ಅವಮಾನವಾಗಿದ್ದಕ್ಕೆ ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವಿಚಾರ ತಿಳಿದ ಬಳಿಕ ಗಾನವಿ ಕುಟುಂಬಸ್ಥರು ಸೂರಜ್‌ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿ ಅವಮಾನ ಮಾಡಿದ್ದರು. ಚಿಕಿತ್ಸೆ ಫಲಿಸದೇ ಗಾನವಿ ಮೃತಪಟ್ಟ ಬಳಿಕ ಅವಮಾನ ತಾಳಲಾರದೇ ಸೂರಜ್‌ ಕುಟುಂಬ ನಾಗಪುರಕ್ಕೆ ತೆರಳಿತ್ತು.

ಏನಿದು ಪ್ರಕರಣ? – ಅಕ್ಟೋಬರ್ 29ರಂದು ಮೃತ ಗಾನವಿ ಹಾಗೂ ಸೂರಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು. ಕಳೆದ ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ಗೆಂದು ಹೋಗಿದ್ದರು. ಆದರೆ ಭಾನುವಾರ (ಡಿ.21) ಹನಿಮೂನ್‌ ಮುಗಿಸದೇ ಅರ್ಧಕ್ಕೆ ಶ್ರೀಲಂಕಾದಿಂದ ಇಬ್ಬರು ವಾಪಸ್ಸಾಗಿದ್ದರು.

ಜಗಳದ ಹಿನ್ನೆಲೆ ಸೋಮವಾರ (ಡಿ.22) ಗಾನವಿ ಕುಟುಂಬಸ್ಥರು ಆಕೆಯನ್ನು ತಮ್ಮ ಮನೆಗೆ ಕರೆ ತಂದಿದ್ದರು. ಬಳಿಕ ಬುಧವಾರ (ಡಿ.23) ಮಧ್ಯಾಹ್ನ ಹೊತ್ತಿಗೆ ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದರು. ರಕ್ಷಿಸಲು ಮುಂದಾಗಿದ್ದ ಮನೆಯವರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ವೈದ್ಯರು ಬ್ರೈನ್ ಡೆಡ್ ಆಗಿದೆ ಎಂದು ಹೇಳಿ, ವೆಂಟಿಲೇಟರ್‌ನಲ್ಲಿ ಇರಿಸಿದ್ದರು. ಆದರೆ ಗುರುವಾರ (ಡಿ.25) ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಗಾನವಿ ಸಾವನ್ನಪ್ಪಿದ್ದಾರೆ. ಸದ್ಯ ಗಾನವಿ ಕುಟುಂಬಸ್ಥರು ಸೂರಜ್ ಕುಟುಂಬಸ್ಥರ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆಗೆ ನೀಡಿದ್ದಾರೆ ಎಂದು ಆರೋಪಿಸಿದ್ದರು.