ನವದೆಹಲಿ : ಚೀನಾ ಪರ ಪ್ರಚಾರಕ್ಕಾಗಿ ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಆನ್ ಲೈನ್ ಪೋರ್ಟಲ್ ನ್ಯೂಸ್ ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಅಡಿಯಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಬೀರ್ ಪುರ್ಕಾಯಸ್ಥ ಅವರನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ದೆಹಲಿ ಪೊಲೀಸರು ಇಂದು (ಬುಧವಾರ) ಬೆಳಿಗ್ಗೆ ಬೆಳಗ್ಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ನ್ಯೂಸ್ ಕ್ಲಿಕ್ ನ್ಯೂಸ್ ಪೋರ್ಟಲ್ ನ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಪುರ್ಕಾಯಸ್ಥ ಜೊತೆಗೆ ಬಂಧಿಸಲಾಗಿದ್ದು, ವಿಶೇಷ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಚೀನಾ ಪರ ಪ್ರಚಾರಕ್ಕಾಗಿ ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ನ್ಯೂಸ್ ಕ್ಲಿಕ್ ಕಚೇರಿ ಮತ್ತು ಸುದ್ದಿ ಪೋರ್ಟಲ್ ಗೆ ಸಂಬಂಧಿಸಿದ ಸುಮಾರು 40 ಪತ್ರಕರ್ತರು ಮತ್ತು ಸಿಬ್ಬಂದಿಗಳ ನಿವಾಸಗಳ ಮೇಲೆ ದೆಹಲಿ ಪೊಲೀಸರು ಮಂಗಳವಾರ ದಾಳಿ ನಡೆಸಿದ ನಂತರ ಪುರ್ಕಾಯಸ್ಥ ಮತ್ತು ಚಕ್ರವರ್ತಿ ಅವರನ್ನು ಬಂಧಿಸಲಾಯಿತು.
ದಾಳಿ ವೇಳೆ 46 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಅವರಲ್ಲಿದ್ದ ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಡಿಜಿಟಲ್ ಸಾಧನಗಳನ್ನು ಮತ್ತು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.