ಮನೆ ಸುದ್ದಿ ಜಾಲ ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ ಪ್ರಕರಣಕ್ಕೆ ಎನ್‌ಐಎ ಎಂಟ್ರಿ..!

ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ ಪ್ರಕರಣಕ್ಕೆ ಎನ್‌ಐಎ ಎಂಟ್ರಿ..!

0

ಮೈಸೂರು : ಹೀಲಿಯಂ ಸಿಲಿಂಡರ್‌ ಸ್ಫೋಟ ಪ್ರಕರಣಕ್ಕೆ ಈಗ ರಾಷ್ಟ್ರೀಯ ತನಿಖೆ ದಳ ಎಂಟ್ರಿಯಾಗಿದೆ. ಇಂದು ಮೈಸೂರಿಗೆ ಎನ್‌ಎಐ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪೊಲೀಸರ ಜೊತೆ ತನಿಖೆಯ ಮಾಹಿತಿ ಪಡೆಯಲಿದ್ದಾರೆ. ಸಾಧಾರಣವಾಗಿ ಹೀಲಿಯಂ ಸ್ಫೋಟವಾಗುವುದಿಲ್ಲ. ಹೀಗಿದ್ದರೂ ಅರಮನೆಯ ಆವರಣದಲ್ಲೇ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಹಲವಾರು ಅನುಮಾನಗಳು ಈಗ ವ್ಯಕ್ತವಾಗಿದೆ. ಸ್ಫೋಟದ ತೀವ್ರತೆಗೆ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಬಲೂನ್‌ ಮಾರುತ್ತಿದ್ದ ಸಲೀಂ (40) ಮೃತಪಟ್ಟಿದ್ದು, ಮೃತದೇಹ ಛಿದ್ರ-ಛಿದ್ರವಾಗಿದೆ.

ಆರಂಭದಲ್ಲಿ ಮೃತ ಸಲೀಂ ಕೋಲ್ಕತ್ತಾದ ಮೂಲದವನು ಎನ್ನಲಾಗಿತ್ತು. ಆದರೆ ಈಗ ಉತ್ತರ ಪ್ರದೇಶ ಮೂಲದವನು ಎಂಬ ಮಾಹಿತಿ ಲಭ್ಯವಾಗಿದೆ. ಉತ್ತರ ಪ್ರದೇಶದಿಂದ ಸಹೋದರರ ಜೊತೆ ಮೈಸೂರಿಗೆ ಆಗಮಿಸಿದ ಈತ ಕಳೆದ 15 ದಿನಗಳಿಂದ ಲಷ್ಕರ್ ಮೊಹಲ್ಲಾದ ಷರೀಫ್ ಲಾಡ್ಜ್‌ನಲ್ಲಿ ವಾಸವಾಗಿದ್ದ ಎಂದು ವರದಿಯಾಗಿದೆ. ಮೈಸೂರು ಪ್ರಕರಣದಲ್ಲಿ ಹೀಲಿಯಂಗೆ ಬೇರೆ ಗ್ಯಾಸ್‌ ಮಿಶ್ರಣ ಮಾಡಿರುವ ಅನುಮಾನ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ ಒಂದು ತಿಂಗಳ ಹಿಂದೆ ಸಲೀಂ ಮೈಸೂರಿಗೆ ಬಂದಿದ್ದಾನೆ. ಬಂದವನಿಗೆ ಅಷ್ಟು ಸುಲಭವಾಗಿ ಹೀಲಿಯಂ ಸಿಲಿಂಡರ್‌ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ.

ಸೈಕಲ್‌ನಲ್ಲಿ ಹೀಲಿಯಂ ಬಲೂನ್ ಮಾರುತ್ತಿದ್ದಾಗ ರಾತ್ರಿ 8:30ರ ವೇಳೆಗೆ ಸಿಲಿಂಡರ್ ಸ್ಫೋಟವಾಗಿದೆ. ಪ್ರತ್ಯಕ್ಷದರ್ಶಿ ಅರಮನೆಯ ಗೈಡ್‌ ನೀಡಿದ ಮಾಹಿತಿ ಪ್ರಕಾರ ಬಲೂನ್ ಮಾರಾಟಗಾರ ಅರಮನೆ ಮುಂಭಾಗದಲ್ಲಿ ನಿಂತು ಯಾವತ್ತೂ ಬಲೂನ್ ಮಾರುತ್ತಿರಲಿಲ್ಲ. ಆತ ಬಂದ ಕೂಡಲೇ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ನೆನ್ನೆ (ಗುರುವಾರ) ಈ ಜಾಗದಲ್ಲಿ ನಿಂತು ಬಲೂನು ಮಾರಾಟ ಮಾಡಿರಲಿಲ್ಲ. ಹಾಗಾದರೆ ಅರಮನೆ ಮುಂಭಾಗವೇ ಸಿಲಿಂಡರ್ ಸ್ಪೋಟ ಯಾಕಾಯ್ತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸಿಲಿಂಡರ್ ಸ್ಪೋಟ ಆಕಸ್ಮಿಕವೇ? ಅಥವಾ ಉದ್ದೇಶಪೂರ್ವಕವೇ? ಯಾವತ್ತೂ ಅರಮನೆ ಮುಂಭಾಗದಲ್ಲಿ ಕಾಣಿಸಿಕೊಳ್ಳದವನೂ ರಾತ್ರಿ ಇಲ್ಲಿಗೆ ಬಂದಿದ್ದು ಯಾಕೆ? ಏಕಾಏಕಿ ಅರಮನೆ ಮುಂಭಾಗವೇ ಸಿಲಿಂಡರ್ ಸ್ಫೋಟ ಯಾಕಾಯಿತು ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

ಅರಮನೆ ಬಳಿ ವಸ್ತುಗಳನ್ನು ಮಾರಾಟ ಮಾಡುವವರು ಸಾಮಾನ್ಯವಾಗಿ ಮೈಸೂರಿನ ಅಸುಪಾಸಿನ ಜನರೇ ಆಗಿರುತ್ತಾರೆ. ಈಗ ಬಲೂನ್ ಮಾರುತ್ತಿದ್ದ ವ್ಯಕ್ತಿಯ ಹಿನ್ನೆಲೆಯ ಬಗ್ಗೆ ಈಗ ತನಿಖೆ ಶುರುವಾಗಿದೆ. ಉತ್ತರ ಪ್ರದೇಶ ಮೂಲದ ಸಲೀಂ ಮೈಸೂರಿಗೆ ಬಂದಿದ್ದು ಯಾವಾಗ? ಎಷ್ಟು ವರ್ಷದಿಂದ ಬಲೂನ್ ಮಾರುತ್ತಿದ್ದ? ಅರಮನೆ ಮುಂಭಾಗವೇ ಸಲೀಂ ನಿರಂತರವಾಗಿ ಬಲೂನ್ ಮಾರುತ್ತಿದ್ದನೇ ಅಥವಾ ನಿನ್ನೆ ಮೊದಲು ಬಂದಿದ್ದ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸಲೀಂ ಜೊತೆ ವಾಸವಿದ್ದ ಇಬ್ಬರನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಸಲೀಂ ಜೊತೆ ಬಲೂನ್ ಮಾರಾಟಕ್ಕೆ ಉತ್ತರ ಪ್ರದೇಶದಿಂದ ಇಬ್ಬರು ಬಂದಿದ್ದರು. ಪ್ರತಿ ದಿನ ಸಲೀಂ ಜೊತೆ ಇಬ್ಬರು ಬಲೂನ್ ಮಾರಾಟ ಮಾಡುವುದಕ್ಕೆ ಹೋಗುತ್ತಿದ್ದರು. ನಿನ್ನೆ ಸಲೀಂ ಒಬ್ಬನೇ ಮಾತ್ರ ಬಲೂನ್ ಮಾರಾಟ ಮಾಡಲು ಹೋಗಿದ್ದ. ಮತ್ತಿಬ್ಬರು ನಿನ್ನೆ ರೂಂನಲ್ಲಿಯೇ ಇದ್ದರು. ಲಾಡ್ಜ್ ಮುಂಭಾಗದಲ್ಲೇ ಎರಡು ಸೈಕಲ್ ಗಳು ನಿಂತಿತ್ತು. ಸಲೀಂ ಅರಮನೆಯ ಒಳಗಡೆ ಹೋಗಿರುವ ಫೋಟೋ ಈಗ ಲಭ್ಯವಾಗಿದೆ. ಅರಮನೆಯೊಳಗೆ ಸಲೀಂ ಹೋಗಿದ್ದು ಯಾವಾಗ? ಸಲೀಂ ಕೇವಲ ಬಲೂನ್ ಮಾರಾಟ ಮಾಡುತಿದ್ದನೇ ಅಥವಾ ಬೇರೆ ಯಾವ ಕೆಲಸ ಮಾಡುತ್ತಿದ್ದನೇ ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೀಲಿಯಂ ಜಡ ಅನಿಲವಾಗಿದ್ದು ಆಮ್ಲಜನಕ ಅಥವಾ ಇತರ ಅಂಶಗಳೊಂದಿಗೆ ಪ್ರತಿಕ್ರಿಯಿಸದ ಕಾರಣ ಅದು ಸ್ಫೋಟವಾಗುವುದಿಲ್ಲ. ಇದು ಸಂಪೂರ್ಣವಾಗಿ ದಹಿಸಲಾಗದ ಮತ್ತು ಹೆಚ್ಚು ದಹಿಸಬಲ್ಲ ಹೈಡ್ರೋಜನ್‌ ಬಲೂನ್‌ಗಳಿಗೆ ಹೆಚ್ಚು ಸುರಕ್ಷಿತವಾಗಿದೆ. ಈ ಕಾರಣಕ್ಕೆ ಜಾತ್ರೆಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ ಹೀಲಿಯಂ ತುಂಳನ್ನು ಮಾರಾಟ ಮಾಡಲಾಗುತ್ತದೆ. ಹೀಲಿಯಂ ರಾಸಾಯನಿಕವಾಗಿ ಸ್ಥಿರವಾಗಿರುತ್ತದೆ ಮತ್ತು ಸುಡುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಹೈಡ್ರೋಜನ್ ಬಲೂನ್‌ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿದಾಗ ಸ್ಫೋಟ ಆಗುತ್ತದೆ. ಪಾರ್ಟಿಗಳಲ್ಲಿ MRI ಕೂಲಿಂಗ್ ಮತ್ತು ವೈಜ್ಞಾನಿಕ ಸಂಶೋಧನೆಗಳಲ್ಲಿ ಹೀಲಿಯಂ ಬಳಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.