ಕಾರವಾರ (Karwar): ಐಸಿಸ್ ಲಿಂಕ್ ಹಿನ್ನೆಲೆಯಲ್ಲಿರಾಷ್ಟ್ರೀಯ ತನಿಖಾ ದಳ (ಎನ್ಐಎ) ವು ದೇಶಾದ್ಯಂತ ಭಾನುವಾರ 6 ರಾಜ್ಯಗಳ 13 ಕಡೆಗಳಲ್ಲಿ ದಾಳಿ ನಡೆಸಿದ್ದು, ಕೆಲವರನ್ನು ವಶಕ್ಕೆ ಪಡೆದಿದೆ.
ಕರ್ನಾಟಕ ಸೇರಿದಂತೆ ಒಟ್ಟು 6 ರಾಜ್ಯಗಳಲ್ಲಿ ದಾಳಿ ಮಾಡಲಾಗಿದೆ. ರಾಜ್ಯದ ಭಟ್ಕಳ ಹಾಗೂ ತುಮಕೂರಿನಲ್ಲೂ ಎನ್‌ಐಎ ಮಿಂಚಿನ ಕಾರ್ಯಾಚರಣೆ ನಡೆಸಿದೆ.
ಗುಜರಾತ್ ರಾಜ್ಯದ ಸೂರತ್ ಹಾಗೂ ಕರ್ನಾಟಕದ ಭಟ್ಕಳ ಪಟ್ಟಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳದಲ್ಲಿ ಬೆಳ್ಳಂಬೆಳಗ್ಗೆ 4 ಗಂಟೆಗೆ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಎನ್ಐಎ ದಾಳಿ ನಡೆಸಿದೆ. ಗುಜರಾತ್ ರಾಜ್ಯದ ಎಟಿಎಸ್ ಸಹಯೋಗದಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಬೆಳಿಗ್ಗೆ 5ಕ್ಕೆ ದಾಳಿ ನಡೆಸಿ ಯುವಕನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.
ಐಸಿಸ್ ಸಂಪರ್ಕದ ಆರೋಪದ ಮೇರೆಗೆ 2021ರಲ್ಲಿ ಭಟ್ಕಳದಲ್ಲಿ ಓರ್ವನನ್ನ ಬಂಧಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದ ಎನ್‌ಐಎ, ಭಾನುವಾರ ಮಧ್ಯ ಪ್ರದೇಶದ ಎರಡು ಕಡೆ, ಗುಜರಾತ್ ರಾಜ್ಯದ ನಾಲ್ಕು ಕಡೆ, ಮಹಾರಾಷ್ಟ್ರ, ಕರ್ನಾಟಕದಲ್ಲಿ ತಲಾ ಎರಡು ಕಡೆ ಹಾಗೂ ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ದಾಳಿ ನಡೆಸಿದೆ.
ಪ್ರಕರಣವೇನು?
ಐಸಿಸ್ ಪ್ರಚಾರದ ಆನ್‌ಲೈನ್ ಮ್ಯಾಗಜೀನ್ ‘ವಾಯ್ಸ್ ಆಫ್ ಹಿಂದ್’ನ ಪ್ರಕಟಣೆ ಮತ್ತು ಪ್ರಸರಣದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಆರೋಪದ ಮೇರೆಗೆ 2021ರ ಆಗಸ್ಟ್‌ನಲ್ಲಿ ಭಟ್ಕಳದಲ್ಲಿ ಜುಫ್ರಿ ಜವಾಹರ್ ದಾಮುದಿ ಅಲಿಯಾಸ್ ಅಬು ಹಾಜಿರ್ ಅಲ್ ಬದರಿಯನ್ನು ಎನ್‌ಐಎ ಮತ್ತು ರಾಜ್ಯ ಪೊಲೀಸರ ನೇತೃತ್ವದ ಸಂಘಟಿತ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು. ಈತ ಐಸಿಸ್ ಪ್ರಚಾರ ಮತ್ತು ಮಾಧ್ಯಮ ಚಟುವಟಿಕೆಗಳ ಹೊರತಾಗಿ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಖರೀದಿ, ಮುಜಾಹಿದ್ದೀನ್‌ಗಳಿಗೆ ನಿಧಿ ಸಂಗ್ರಹಣೆ ಮತ್ತು ನೇಮಕಾತಿ ಸೇರಿದಂತೆ ವಿವಿಧ ರೀತಿಯ ಬೆಂಬಲ ನೀಡುತ್ತಿದ್ದ ಎಂಬುದು ಎನ್ಐಎ ವಿಚಾರಣೆಯ ವೇಳೆ ತಿಳಿದು ಬಂದಿತ್ತು.
ಈತ ಖೋರಾಸನ್ (ಅಫ್ಘಾನಿಸ್ತಾನ) ಮತ್ತು ಸಿರಿಯಾದ ಇಸ್ಲಾಮಿಕ್ ಸ್ಟೇಟ್ ನಾಯಕರೊಂದಿಗೆ ನೇರ ಸಂಪರ್ಕದಲ್ಲಿದ್ದ. ಸೈಬರ್ ಸ್ಪೇಸ್‌ನಲ್ಲಿ ಖೋರಾಸನ್ / ಅಫ್ಘಾನಿಸ್ತಾನ / ಪಾಕಿಸ್ತಾನದಲ್ಲಿ ನೆಲೆಸಿದ್ದಾಗಿ ಗುರುತಿಸಿಕೊಂಡು, ತಮ್ಮ ಸೈಬರ್ ಸಂಪರ್ಕಗಳ ಮೂಲಕ ಕುಫಾರ್‌ಗಳನ್ನು (ಅಪನಂಬಿಕೆದಾರರು), ಪೊಲೀಸ್ ಸಿಬ್ಬಂದಿ, ಪತ್ರಕರ್ತರನ್ನು ಕೊಲ್ಲಲು ಮತ್ತು ದೇವಸ್ಥಾನಗಳು ಹಾಗೂ ಸರ್ಕಾರಿ ಆಸ್ತಿಗಳಿಗೆ ಹಾನಿಯನ್ನುಂಟು ಮಾಡಲು ಪ್ರೇರೇಪಿಸುತ್ತಿದ್ದ ಎಂಬುದು ತಿಳಿದು ಬಂದಿತ್ತು. ಬಳಿಕ ಚುರುಕಿನ ಕಾರ್ಯಾಚರಣೆಯ ಮೂಲಕ ಭದ್ರತಾ ಸಂಸ್ಥೆಗಳು ಭಟ್ಕಳದಲ್ಲಿ ಜುಫ್ರಿ (30) ಮತ್ತು ಆತನ ಸಹಚರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಜುಫ್ರಿಯನ್ನ ಬಂಧಿಸಲಾಗಿದ್ದು, ಈತನ ವಿಚಾರಣೆಯ ವೇಳೆ ಭಟ್ಕಳದ ಮತ್ತು ಗುಜರಾತ್‌ನ ಸೂತ್ರಧಾರಿಗಳ ಹೆಸರುಗಳನ್ನು ಬಹಿರಂಗಪಡಿಸಿದ್ದ. ಈ ಹಿನ್ನೆಲೆಯಲ್ಲಿ ಎನ್ಐಎ ಕಳೆದ ಆಗಸ್ಟ್‌ನಿಂದಲೇ ಇವರ ಮೇಲೆ ಕಣ್ಣಿಟ್ಟಿತ್ತು. ಕೊನೆಗೂ ಇದೀಗ ದಾಳಿ ನಡೆಸಿ ಇವರನ್ನು ವಶಕ್ಕೆ ಪಡೆದುಕೊಂಡಿದೆ.














