ಮನೆ ರಾಷ್ಟ್ರೀಯ ನಿಕೋಲಸ್ ಮಡುರೋ ಸತ್ಯ ಸಾಯಿಬಾಬಾರ ಪರಮ ಭಕ್ತ..!

ನಿಕೋಲಸ್ ಮಡುರೋ ಸತ್ಯ ಸಾಯಿಬಾಬಾರ ಪರಮ ಭಕ್ತ..!

0

ಕಾರಕಸ್ : ವೆನುಜುವೆಲಾದ ಅಧ್ಯಕ್ಷರಾಗಿದ್ದ ನಿಕೋಲಸ್ ಮಡುರೋ ಸತ್ಯ ಸಾಯಿಬಾಬಾ ಅವರ ಪರಮಭಕ್ತರಾಗಿದ್ದರು. ಸುಮಾರು 15 ಸಾವಿರ ಕಿ.ಮೀ ದೂರದಲ್ಲಿದ್ದರೂ ಮಡುರೋ ಎರಡು ಬಾರಿ ಆಂಧ್ರಪ್ರದೇಶದ ಪುಟ್ಟಪರ್ತಿಗೆ ಆಗಮಿಸಿದ್ದರು.

ವಿದೇಶಾಂಗ ಸಚಿವರಾಗಿದ್ದ ಅವಧಿಯಲ್ಲಿ 2005 ಮತ್ತು 2012ರಲ್ಲಿ ಮಡುರೋ ಭಾರತಕ್ಕೆ ಆಗಮಿಸಿದ್ದಾಗ ಪತ್ನಿಯೊಂದಿಗೆ ಪುಟ್ಟಪರ್ತಿಗೆ ತೆರಳಿ ಸಾಯಿಬಾಬಾರನ್ನು ಭೇಟಿಯಾಗಿದ್ದರು. 2005 ರಲ್ಲಿ ವಿದೇಶಾಂಗ ಸಚಿವರಾಗಿದ್ದ ವೇಳೇ ಅವರು ಭಾರತದ ಜೊತೆ ಮಾತುಕತೆಗೆ ಬಂದಿರಲಿಲ್ಲ. ಆಧ್ಯಾತ್ಮಿಕ ಗುರು ಸಾಯಿಬಾಬಾ ದರ್ಶನ ಪಡೆಯಲು ಭಾರತಕ್ಕೆ ಆಗಮಿಸಿದ್ದರು.

ಸಾಯಿಬಾಬಾ ಅವರು ಕಾಲಿಗೆ ನಮಸ್ಕರಿಸಿ ದಂಪತಿ ನೆಲದಲ್ಲಿ ಕುಳಿತು ಭಕ್ತಿಯನ್ನು ಪ್ರದರ್ಶಿಸಿದ್ದರು. ಕ್ರೈಸ್ತರಾಗಿದ್ದ ದಂಪತಿ ಸಾಯಿಬಾಬಾ ಅವರ ಮೇಲಿನ ಪ್ರೇಮದಿಂದ ಹಿಂದೂ ಸಂಪ್ರದಾಯದ ಪಾಲನೆಯನ್ನು ಆರಂಭಿಸಿದ್ದರು. ತಮ್ಮ ಕಚೇರಿಯಲ್ಲಿ ಸೈಮನ್ ಬೊಲಿವರ್, ಚಾವೆಜ್ ಭಾವಚಿತ್ರಗಳ ಜೊತೆ ಸತ್ಯ ಸಾಯಿಬಾಬಾ ಅವರ ದೊಡ್ಡ ಫೋಟೋವನ್ನು ಇರಿಸಿದ್ದರು. ಮಡುರೋ ಅವರ ಪತ್ನಿ ಸಿಲಿಯಾ ಫ್ಲೋರ್ಸ್‌ ಸಾಯಿಬಾಬರ ಪರಮ ಭಕ್ತೆಯಾಗಿದ್ದರು.

ಪತ್ನಿಯಿಂದ ಪ್ರಭಾವಿತರಾದ ಮಡುರೋ ನಂತರ ಸಾಯಿಬಾಬಾ ಅವರ ಅನುಯಾಯಿ ಆಗಿ ಬದಲಾಗಿದ್ದರು. ಏಪ್ರಿಲ್ 2011 ರಲ್ಲಿ ಸತ್ಯಸಾಯಿ ಬಾಬಾ ನಿಧನರಾದಾಗ ವಿದೇಶಾಂಗ ಸಚಿವರಾಗಿದ್ದ ಮಡುರೊ ನೇತೃತ್ವದಲ್ಲಿ ರಾಷ್ಟ್ರೀಯ ಸಭೆಯು ಅಧಿಕೃತ ಸಂತಾಪ ನಿರ್ಣಯವನ್ನು ಅಂಗೀಕರಿಸಿತ್ತು.

ಮಡುರೋ ಅವರ ಆಳ್ವಿಕೆಯಲ್ಲಿ ವಿದೇಶಿ ಸರ್ಕಾರೇತರ ಸಂಸ್ಥೆಗಳ ಚಟುವಟಿಕೆಯನ್ನು ಬಂದ್‌ ಮಾಡಲಾಗಿತ್ತು. ಆದರೆ ಸತ್ಯಸಾಯಿ ಸಂಘಟನೆಗಳು ವೆನೆಜುವೆಲಾದಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದವು. ಸಾಯಿಬಾಬಾ ಕೇಂದ್ರಗಳು ಶಾಲೆಗಳು ಮತ್ತು ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ವ್ಯಾಲ್ಯೂಸ್ ಅನ್ನು ನಡೆಸುತ್ತಿದ್ದವು, ದೇಶಾದ್ಯಂತ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿದ್ದವು.