ಬೆಂಗಳೂರು: ವೈಟ್ ಬೋರ್ಡ್ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಘೋಷಣೆ ಮಾಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ವೈಟ್ ಬೋರ್ಡ್ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ. ಯಲ್ಲೋ ಬೋರ್ಡ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಇರಲಿದೆ. ದುಡಿಯುವ ಉದ್ದೇಶದಿಂದ ಕಾರು ಖರೀದಿಸಿದವರ ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ. ಶೀಘ್ರದಲ್ಲೇ ಈ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಅನ್ನಭಾಗ್ಯ ಯೋಜನೆಗಾಗಿ ರಾಜ್ಯಕ್ಕೆ ಆಂಧ್ರ ಮತ್ತು ತೆಲಂಗಾಣ ಎರಡು ರಾಜ್ಯಗಳು ಅಕ್ಕಿ ಪೂರೈಸಲು ಮುಂದಾಗಿವೆ. ಹೀಗಾಗಿ ಸೆಪ್ಟಂಬರ್ ನಿಂದ ಹಣದ ಬದಲು 10 ಕೆ.ಜಿ ಅಕ್ಕಿ ನೀಡುವ ಚಿಂತನೆ ನಡೆಸಲಾಗಿದೆ. ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡಿದ್ದೇವೆ 1 ವಾರದಲ್ಲಿ ಅಲ್ಲಿನ ಅಧಿಕಾರಿಗಳು ನಿರ್ಧರಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಹೊಸದಾಗಿ ಪಡಿತರ ಕಾರ್ಡ್ ವಿತರಣೆಗೆ ಸೂಚನೆ ನೀಡಲಾಗಿದೆ. ನೀತಿ ಸಂಹಿತಿ ಜಾರಿ ಹಿನ್ನೆಲೆ ರೇಷನ್ ಕಾರ್ಡ್ ವಿತರಣೆ ಸ್ಥಗಿತವಾಗಿತ್ತು. ಈಗ ಹೊಸ ಪಡಿತರ ಕಾರ್ಡ್ ವಿತರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಜೊತೆಗೆ ಪಡಿತರ ಕಾರ್ಡ್ಗೆ ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದು ಕೆ.ಎಚ್ ಮುನಿಯಪ್ಪ ತಿಳಿಸಿದರು.