ವಿಜಯಪುರ: ಎರಡೂವರೆ ವರ್ಷಕ್ಕೆ ಸಿಎಂ ಬದಲಾವಣೆ ಮಾಡುವ ಬಗ್ಗೆ ಒಪ್ಪಂದವಾಗಿದೆ ಎಂದು ಯಾರು ಹೇಳಿದ್ದು? ಆ ರೀತಿ ಯಾವುದು ಇಲ್ಲ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ಚರ್ಚೆ ಮಾಡಿದರೆ ನಾವೇನೂ ಮಾಡಲಾಗದು. ಸಾರ್ವಜನಿಕ ಚರ್ಚೆ ಮಾಡುವ ವಿಚಾರವೂ ಅಲ್ಲ. ಸಿದ್ದರಾಮಯ್ಯ ನಮ್ಮ ಸಿಎಂ ಆಗಿದ್ದಾರೆ. ಒಳ್ಳೆಯ ಆಡಳಿತಗಾರದ್ದಾರೆ. ಒಬ್ಬರು ಸಿಎಂ ಇದ್ದಾಗ ಬದಲಾವಣೆ ಬಗ್ಗೆ ಪ್ರಶ್ನೆಯೇ ಇಲ್ಲ. ಬದಲಾವಣೆ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಈ ಬಗ್ಗೆ ಯಾವ ಚರ್ಚೆನೂ ಇಲ್ಲ. ಸಿಎಂ ಬದಲಾವಣೆ ವಿಚಾರ ಈಗ ಅಪ್ರಸ್ತುತ. ಉಳಿದವರು ಏನೇ ಹೇಳಬಹುದು, ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಹೇಳುತ್ತಿರುವುದು ಕಾಂಗ್ರೆಸ್ ಪಕ್ಷದ ವಿಚಾರ. ಉಳಿದವರು ಅವರ ವೈಯಕ್ತಿಕ ವಿಚಾರ ಹೇಳಿದ್ದಾರೆ. ಒಕ್ಕಲಿಗ ಸ್ವಾಮೀಜಿ ಅವರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಬೇರೆಯವರು ಮಾತನಾಡಿದ್ದರೆ ಅದರ ಬಗ್ಗೆ ನಾನು ಏನೂ ಹೇಳಲಾಗದು ಎಂದು ದಿನೇಶ್ ಹೇಳಿದರು.
ಹೆಚ್ಚುವರಿ ಡಿಸಿಎಂ ಬೇಡಿಕೆ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್ ನಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಕೆಲವರು ಅವರವರ ಅಭಿಪ್ರಾಯ ಹೇಳಿದ್ದಾರೆ. ರಾಜಣ್ಣ ಸಿದ್ದರಾಮಯ್ಯ ಅಭಿಮಾನಿ, ಅದಕ್ಕೆ ಹೇಳಿದ್ದಾರೆ. ನಾವೇನು ಮಾಡೋಕಾಗಲ್ಲ. ಸಿಎಂ ಬದಲಾವಣೆ ಯಾಕೆ ಮಾಡಬೇಕು. ಅವರೇನು ಜನಪ್ರಿಯ ನಾಯಕರಲ್ಲವಾ ಎಂದು ಪ್ರಶ್ನಿಸಿದರು.