ಮೈಸೂರು(Mysuru): ‘ಜಗದೀಶ್ ಶೆಟ್ಟರ್(Jagadish shetar) ಅವರು ಇದೇ ಮೊದಲು ದೆಹಲಿಗೆ ಹೋಗಿಲ್ಲ. ಈ ಕುರಿತು ಬೇರೆ ಯಾವುದೇ ವ್ಯಾಖ್ಯಾನ ಬೇಡ’ ಎಂದು ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್(S.T.Somshekar) ಹೇಳಿದರು.
ಜಗದೀಶ್ ಶೆಟ್ಟರ್ ಅವರು ಅಮಿತ್‌ಷಾ ಭೇಟಿ ಮಾಡಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆಯಾಗುತ್ತದೆ ಎಂದು ಹೇಳುವುದು ಸರಿಯಲ್ಲ. ಮುಖ್ಯಮಂತ್ರಿಯವರೂ ದೆಹಲಿಯಲ್ಲಿ ವಿವಿಧ ಇಲಾಖೆಗಳ ಸಚಿವರನ್ನು ಭೇಟಿ ಮಾಡಿದ್ದಾರೆ. ಅಮಿತ್‌ಷಾ ಅವರನ್ನು ಭೇಟಿ ಮಾಡಬೇಕೆಂದುಕೊಂಡಿದ್ದರೆ ಅವಕಾಶ ಸಿಗುತ್ತಿತ್ತು. ಯಾರನ್ನು, ಯಾವಾಗ ಭೇಟಿ ಮಾಡಬೇಕು ಎನ್ನುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷಬೇಧ ಮರೆತು ಮತಯಾಚನೆ ಮಾಡಲಾಗುತ್ತಿದೆ. ಹೀಗಾಗಿಯೇ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರನ್ನೂ ಭೇಟಿಯಾಗಿ ಬಿಜೆಪಿ ಅಭ್ಯರ್ಥಿ ರವಿಶಂಕರ್ ಅವರನ್ನು ಬೆಂಬಲಿಸಲು ಮನವಿ ಮಾಡಲಾಗಿದೆ. ಏಪ್ರಿಲ್ 11 ರಿಂದ 14ರವರೆಗೆ ಮತ ಯಾಚನೆ ನಡೆಯಲಿದೆ ಎಂದು ಹೇಳಿದರು.
ರೈತರಿಗೆ ಶೇ 1ರಷ್ಟು ಬಡ್ಡಿ ಉಳಿತಾಯ ಆಗುತ್ತದೆ ಎಂಬ ಕಾರಣಕ್ಕೆ ಡಿಸಿಸಿ ಬ್ಯಾಂಕ್‌ಗಳನ್ನು ಅಪೆಕ್ಸ್ ಬ್ಯಾಂಕ್ ಜತೆ ವಿಲೀನ ಮಾಡುವ ಚಿಂತನೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ವಿಲೀನ ಮಾಡಲಾಗಿದ್ದು, ಅಧಿಕಾರಿಗಳು ಅಲ್ಲಿಗೆ ತೆರಳಿ ಅಧ್ಯಯನ ನಡೆಸಿ, ಸಾಧಕ ಬಾಧಕಗಳ ಕುರಿತು ವರದಿ ಸಲ್ಲಿಸುವರು. ನಂತರವಷ್ಟೇ ಈ ಚರ್ಚಿಸಿದ ನಂತರ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.
ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮೈಸೂರಿನ ಅಭಿವೃದ್ಧಿ ಬಗ್ಗೆ ಗಮನಹರಿಸಲಾಗಿದೆ. ಫಿಲ್ಮ್ ಸಿಟಿ ನಿರ್ಮಾಣ, ವಿಮಾನನಿಲ್ದಾಣ, ಕೆ.ಆರ್ ಆಸ್ಪತ್ರೆಗೆ ಹಣ ಬಿಡುಗಡೆಯಾಗಿದೆ ಎಂದು ಹೇಳಿದರು.
‘ಮಹಿಳಾ ಮೇಯರ್ ಮೇಲೆ ಕಾಂಗ್ರೆಸ್, ಜೆಡಿಎಸ್‌ಗೆ ಏಕೆ ಕೋಪ. ಅವಧಿ ಮುಗಿದಿದೆ. ಶಿಸ್ತು ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಮೈಸೂರು ಅಭಿವೃದ್ಧಿ ಬಗ್ಗೆ ಅವರದ್ದೇ ಆದ ಕನಸುಗಳಿವೆ. ಹೀಗಾಗಿ, ಅವರು ಪಾಲಿಕೆ ಬಜೆಟ್ ಮಂಡಿಸಲು ಉತ್ಸುಕರಾಗಿದ್ದಾರೆ’ ಎಂದರು.‘
ಅವರು ಕೇವಲ 4 ತಿಂಗಳಷ್ಟೇ ಮೇಯರ್ ಆಗಿದ್ದರು. ಇವರೆಲ್ಲ ಎಷ್ಟು ತಿಂಗಳಾಗಿದ್ದರು’ ಎಂದು ಪ್ರಶ್ನಿಸಿದ ಅವರು, ಬಜೆಟ್ ಮಂಡಿಸುವಷ್ಟರಲ್ಲಿ ಮೈಸೂರು ಮುಳುಗಿ ಹೋಗುತ್ತದೆಯೇ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇಯರ್ ಸ್ಥಾನದ ಮೀಸಲಾತಿ ಬಜೆಟ್ ಆದ ಬಳಿಕ ಪ್ರಕಟವಾಗಲಿದೆ. ಮೇಯರ್ ಚುನಾವಣೆಯಲ್ಲಿ ಕಳೆದ ಬಾರಿ ಜೆಡಿಎಸ್ ಸಹಕಾರ ನೀಡಿತ್ತು. ಈ ಬಾರಿ ಬೆಂಬಲ ಕೇಳುವ ಕುರಿತು ಹೈಕಮಾಂಡ್ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು. ಉದ್ದೇಶಪೂರ್ವಕವಾಗಿ ಮೇಯರ್ ಚುನಾವಣೆ ಮುಂದೂಡಿಕೆ ಮಾಡಲಾಗುತ್ತಿದೆ ಎಂಬುದು ಸುಳ್ಳು ಎಂದು ಹೇಳಿದರು.