ಮನೆ ರಾಜಕೀಯ ರಾಜಕೀಯ ವಿಷಯಗಳ ಕುರಿತು ಚರ್ಚೆ ಮಾಡಿಲ್ಲ: ಜಿ. ಪರಮೇಶ್ವರ

ರಾಜಕೀಯ ವಿಷಯಗಳ ಕುರಿತು ಚರ್ಚೆ ಮಾಡಿಲ್ಲ: ಜಿ. ಪರಮೇಶ್ವರ

0

ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಯಾವುದೇ ರೀತಿಯ ರಾಜಕೀಯ ವಿಷಯಗಳ ಕುರಿತು ಚರ್ಚೆ ಮಾಡಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

Join Our Whatsapp Group

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಖರ್ಗೆ ಅವರ ಕುಟುಂಬ ಮತ್ತು ನಮ್ಮ ಕುಟುಂಬ ಒಂದೇ. ರಾಜಕೀಯವನ್ನು ಹೊರತುಪಡಿಸಿ, ನನಗೆ ಅವರು ಹಿರಿಯಣ್ಣನಂತೆ. ನಾನು ಆಗಾಗ ಅವರನ್ನು ಭೇಟಿ ಮಾಡುತ್ತೇನೆ. ಈ ವೇಳೆ ಕುಟುಂಬದ ವಿಚಾರಗಳನ್ನು ಮಾತನಾಡುತ್ತೇವೆ. ಭೇಟಿ ಆದಾಗಲೆಲ್ಲ ರಾಜಕೀಯ ವಿಚಾರಗಳನ್ನು ಮಾತನಾಡಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಖರ್ಗೆ ಅವರನ್ನು ಭೇಟಿ ಮಾಡಿರುವ ವಿಚಾರದಲ್ಲಿ ಮುಚ್ಚುಮರೆ ಏನಿದೆ? ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿದ್ದರೆ, ಮಾಡಿರುವುದಾಗಿ ಹೇಳುತ್ತಿದ್ದೆ. ಆದರೆ, ಏನು ಮಾತನಾಡಿದ್ದೇನೆ ಎಂಬುದನ್ನು ನಿಮ್ಮ ಮುಂದೆ ಹೇಳುತ್ತಿರಲಿಲ್ಲ’ ಎಂದರು.

ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತೀರಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ದೆಹಲಿಗೆ ಹೋಗಿ ನಮ್ಮ ನಾಯಕರುಗಳನ್ನು ಭೇಟಿ ಮಾಡಿಕೊಂಡು ಬರುತ್ತೇನೆ. ಅದಕ್ಕೆ ಬೇರೆ ಬೇರೆ ಕಲ್ಪನೆಗಳನ್ನು ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದರು.

ಗೋಯೆಲ್‌ಗೆ ನಾಚಿಕೆ ಆಗಬೇಕು:

ರಾಜ್ಯದ ತೆರಿಗೆ ಪಾಲು ಕೇಳಿದರೆ ಸಣ್ಣತನ ಎಂದಿರುವ ಕೇಂದ್ರ ಸಚಿವ ಪೀಯೂಷ್ ಗೋಯೆಲ್ ಅವರಿಗೆ ನಾಚಿಕೆ ಆಗಬೇಕು. ಈ ದೇಶದಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ. ಸ್ವಲ್ಪ ಅರ್ಥ ಮಾಡಿಕೊಂಡು ವಿಶ್ಲೇಷಣೆ ಮಾಡಿಕೊಂಡರೆ ಒಳ್ಳೆಯದು. ಒಕ್ಕೂಟ ವ್ಯವಸ್ಥೆಯಲ್ಲಿ ತೆರಿಗೆ ಪಾಲು ಯಾವ ರೀತಿ ಹಂಚಿಕೆ ಆಗಬೇಕು ಎಂಬುದರ ಬಗ್ಗೆ ನಿಯಮ ಮಾಡಿಟ್ಟಿದ್ದಾರೆ ಎಂದರು.

ಹೆಚ್ಚು ತೆರಿಗೆ ಕಟ್ಟುತ್ತಿರುವ ಕರ್ನಾಟಕದವರಿಗೆ ಹೆಚ್ಚು ಪಾಲು ನೀಡುವಂತೆ ಕೇಳುತ್ತಿದ್ದೇವೆ. ಅದನ್ನು ಗೋಯೆಲ್ ಅವರು ಸಣ್ಣತನವೆಂದು ಹೇಳುತ್ತಾರೆ. ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ದಿವಾಳಿಯಾಗಿದೆ ಎಂದು ಹೇಳುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಆ ರೀತಿ ಮಾತನಾಡಬಾರದು. ಇದೆಲ್ಲ ರಾಜಕಾರಣದಲ್ಲಿ ಸರಿಯಲ್ಲ. ಒಂದು ವ್ಯವಸ್ಥೆ ಮಾಡಿಟ್ಟಿದ್ದಾರೆ. ಆ ವ್ಯವಸ್ಥೆಯಲ್ಲಿ ನಾವೆಲ್ಲ ಹೋಗಬೇಕು. ವ್ಯವಸ್ಥೆ ಬದಲಾವಣೆ ಮಾಡಿಕೊಳ್ಳಲಿ. ಕೇಂದ್ರಕ್ಕೆ ಬಂದಿರುವ ತೆರಿಗೆ ಯಾರಿಗೂ ಕೊಡುವುದಿಲ್ಲ ಎಂದು ನಿಯಮ ಮಾಡಿಕೊಳ್ಳಲಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಜಾತಿ ಗಣತಿ ವರದಿ ಜಾರಿಗೆ ಯಾರು ಅಡ್ಡಿಪಡಿಸಿಲ್ಲ:

ಜಾತಿ ಗಣತಿ ವರದಿ ಜಾರಿಗೆ ಯಾರೂ ಅಡ್ಡಿಪಡಿಸಿಲ್ಲ. ಈ ವರದಿಗೆ ಸಂಬಂಧಿಸಿದಂತೆ ಆಂತರಿಕವಾಗಿ ಇನ್ನೂ ಚರ್ಚೆ ಆಗಬೇಕಿದೆ. ನಂತರ ಹೊರಗೆ ತರಬೇಕು. ಮುಖ್ಯಮಂತ್ರಿಯವರು ತಮ್ಮ ಆರೋಗ್ಯದ ದೃಷ್ಟಿಯಿಂದ ಸಚಿವ ಸಂಪುಟ ಸಭೆಯನ್ನು ಮುಂದೂಡಿದ್ದಾರೆ. ಇದೇ 17ರಂದು ಮಲೆಮಾದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿದ್ದಾರೆ. ಆ ಭಾಗದ ಸಮಸ್ಯೆಗಳ ಕುರಿತು ಚರ್ಚೆ ಮಾಡುವ ಬಗ್ಗೆಯೂ ಅವರು ಹೇಳಿದ್ದಾರೆ ಎಂದರು.