ಬಾಗಲಕೋಟೆ: ರಾಜ್ಯಕ್ಕೆ ನರೇಂದ್ರ ಮೋದಿ ಎಷ್ಟೇ ಬಾರಿ ಬರಲಿ. ಬಿಜೆಪಿ ಗೆಲ್ಲಿಸಿಕೊಳ್ಳಲು ಆಗುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಬಸನಗೌಡ ಯತ್ನಾಳ ಅವರು ಒಂದೊಂದು ಬಾರಿ ಸತ್ಯ ಹೇಳುತ್ತಾರೆ. ಯಡಿಯೂರಪ್ಪನವರ ಮನೆಯಲ್ಲಿಯೇ ಅವರ ಮಗ ಭ್ರಷ್ಟಾಚಾರ ಮಾಡುತ್ತಿದ್ದಾನೆ. ಖ್ಯಮಂತ್ರಿಯಾಗಲು 2,500 ಕೋಟಿ ಕೊಡಬೇಕು ಎಂದು ಹೇಳಿದ್ದರು. ಆದರೂ ಯಾಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಸದಾಶಿವ ಆಯೋಗದ ವರದಿ ಜಾರಿ, ಒಳ ಮೀಸಲಾತಿಗೆ ವಿರೋಧವಿಲ್ಲ. ಚಿತ್ರದುರ್ಗದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಎಸ್.ಅರ್.ಪಾಟೀಲ ಒಳ್ಳೆಯ ಸ್ನೇಹಿತರು. ಯಾವುದೇ ಮುಸುಕಿನ ಗುದ್ದಾಟ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಂಟು ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ. ಕ್ಷೇತ್ರ ವಿಂಗಡಣೆಯಲ್ಲಿ ಸ್ವಂತ ಊರು ವರುಣಾಕ್ಕೆ ಸೇರಿದ್ದರಿಂದ ಅಲ್ಲಿ ಎರಡು ಬಾರಿ ಸ್ಪರ್ಧಿಸಿದೆ. ಕಳೆದ ಬಾರಿ ಬಾದಾಮಿಯಿಂದ ಕಣಕ್ಕಿಳಿದೆ. ಒಂದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಮಾತ್ರ ನಾಯಕರಾ ಎಂದು ಪ್ರಶ್ನಿಸಿದರು.
ಸ್ಯಾಂಟ್ರೊ ರವಿ ಕೇಸ್ ಮುಚ್ಚಿ ಹಾಕಲಾಗುತ್ತಿದೆ
ಸ್ಯಾಂಟ್ರೊ ರವಿ ನಟೋರಿಯಸ್ ಕ್ರಿಮಿನಲ್ ಆಗಿದ್ದು, ಬಿಜೆಪಿ ಸಚಿವರ ಹುಳುಕು ಬಯಲಾಗಬಾರದು ಎಂದು ಪ್ರಕರಣ ಮುಚ್ಚಿ ಹಾಕಲಾಗುತ್ತಿದೆ. ಪೊಲೀಸ್ ವರ್ಗಾವಣೆ ಮಾಡಿಸಿದ್ದೇನೆ ಎಂದು ರವಿ ಹೇಳಿದ್ದಾನೆ. ಸಚಿವರು, ಮುಖಂಡರ ಜತೆಗೆ ಉತ್ತಮ ಸಂಬಂಧವಿದ್ದಾಗಲೇ ವರ್ಗಾವಣೆ ಸಾಧ್ಯ ಎಂದರು.
ಪೊಲೀಸರು ರವಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಬೇಕಿತ್ತು. ಕಸ್ಟಡಿಗೆ ಕೇಳದಿರುವುದನ್ನು ನೋಡಿದರೆ ಪ್ರಕರಣ ಮುಚ್ಚಿ ಹಾಕಲು ಮುಂದಾಗಿರುವುದು ಗೊತ್ತಾಗುತ್ತದೆ ಎಂದು ಆರೋಪಿಸಿದರು.