ಮನೆ ಸುದ್ದಿ ಜಾಲ ಮನುಷ್ಯರು ಎಲ್ಲೇ ಹುಟ್ಟಿದರೂ ಶಾಂತಿ, ಭ್ರಾತೃತ್ವದಿಂದ ಜೀವಿಸಬೇಕು: ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ

ಮನುಷ್ಯರು ಎಲ್ಲೇ ಹುಟ್ಟಿದರೂ ಶಾಂತಿ, ಭ್ರಾತೃತ್ವದಿಂದ ಜೀವಿಸಬೇಕು: ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ

0

ಮೈಸೂರು(Mysuru):  ಎರಡು ದೇಶಗಳ ಬಾಂಧವ್ಯ ಬೆಸೆಯುವ ಕಾರ್ಯಕ್ರಮ ಇದಾಗಿದ್ದು, ಶಾಂತಿ, ಭ್ರಾತೃತ್ವ ಹಾಗೂ ಸೌಹಾರ್ದತೆಯ ಸಂಕೇತವಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್. ಶಿವಪ್ಪ ಅಭಿಪ್ರಾಯ ಪಟ್ಟರು.

ಭಾರತ-ಬಾಂಗ್ಲಾದೇಶ ಸಂಬಂಧಗಳು-ಅಂತಾರಾಷ್ಟ್ರೀಯ ಶಾಂತಿ ಮತ್ತು ತಿಳುವಳಿಕೆ ಪ್ರಚಾರದಲ್ಲಿ ಯುವಜನರ ದೃಷ್ಟಿಕೋನ ಎಂಬ ಶೀರ್ಷಿಕೆಯಡಿ ಸೋಮವಾರ ಮೈಸೂರಿನ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ನಡೆದ ಭಾರತ-ಬಾಂಗ್ಲಾ ದೇಶದ ನಾನಾ ಕ್ಷೇತ್ರದ ಯುವಜನತೆಯ ಬೆಸೆಯುವ, ಉಭಯ ದೇಶಗಳ ಆಚಾರ-ವಿಚಾರ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯರು ಎಲ್ಲೇ ಹುಟ್ಟಲಿ ಆದರೆ ಶಾಂತಿ, ಭ್ರಾತೃತ್ವದಿಂದ ಇರಬೇಕು. ಬಾಂಗ್ಲಾದೇಶದ ಯುವಕರು ಭಾರತಕ್ಕೆ ಆಗಮಿಸಿ ಇಲ್ಲಿನ ಸಂಸ್ಕೃತಿ, ಶಿಕ್ಷಣದ ಬಗ್ಗೆ ಮಾಹಿತಿ ಪಡೆದುಕೊಂಡು, ಒಳ್ಳೆಯ ವಿಚಾರಗಳನ್ನು ತಮ್ಮ ದೇಶದಲ್ಲಿ ಜಾರಿಗೆ ತರಲು ಪ್ರಯತ್ನಿಸುತ್ತಾರೆ. ಎರಡು ದೇಶಗಳು ಶಾಂತಿಯಿಂದ ನೆಲೆಸಲು ಇಂತಹ ಕಾರ್ಯಕ್ರಮ ಸಹಕಾರಿ. ಜೀವನದಲ್ಲಿ ಜೀವಂತಿಕೆ ಇರಬೇಕು. ಶಾಂತಿಯ ರಾಯಭಾರಿಗಳಂತೆ ಬಾಂಗ್ಲಾದೇಶದ ಯುವ ಜನತೆ ಆಗಮಿಸಿರುವುದು ಸಂತಸದ ವಿಷಯ ಎಂದು ಹೇಳಿದರು.

ಬೆಂಗಳೂರು ನೆಹರು ಯುವ ಕೇಂದ್ರದ ನಿರ್ದೇಶಕ ಎಂ.ಎನ್. ನಟರಾಜ್ ಮಾತನಾಡಿ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಯುವಜನ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವರ್ಷ ಅಂತರ ರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಉಭಯ ದೇಶಗಳ ನಡುವೆ ಪರಿಣಾಮಕಾರಿಯಾದ ಸಂಬಂಧ ಹಾಗೂ ಪರಸ್ಪರ ಶಾಂತಿ ಮತ್ತು ಸಹೋದರತ್ವವನ್ನು ವೃದ್ಧಿಸುವುದು, ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಬಾಂಗ್ಲಾ ದೇಶದ 57 ಯುವತಿಯರನ್ನು ಒಳಗೊಂಡಂತೆ 102 ಮಂದಿ ಬಾಂಗ್ಲದೇಶದ ಯುವಜನರ ನಿಯೋಗ ಭೇಟಿ ನೀಡಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರು ಹಾಗೂ ವಿದ್ಯಾರ್ಥಿಗಳೊಡನೆ ವಿಚಾರ ವಿನಿಮಯ ನಡೆಸಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು, ಇನ್ಫೋಸಿಸ್ ಕ್ಯಾಂಪಸ್‌ ಗೆ ಭೇಟಿ ನೀಡಲಿದ್ದಾರೆ ಎಂದರು.

ಮೈಸೂರು ವಿವಿ ಕಾರ್ಯವೈಖರಿ, ವಿದೇಶಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಇರುವ ಅವಕಾಶಗಳು, ಉದ್ಯಮಶೀಲತೆಗೆ ಸಂಬಂಧಿಸಿದಂತೆ ಇರುವ ಅವಕಾಶಗಳು, ಕರ್ನಾಟಕದ ಆಚಾರ ವಿಚಾರಗಳ ಬಗ್ಗೆ ಪ್ರಶ್ನಿಸಿದರು. ಅದಕ್ಕೆ ಸಂಬಂಧಿಸಿದಂತೆ ವಿವಿಯ ಕುಲಸಚಿವ ಪ್ರೊ.ಆರ್. ಶಿವಪ್ಪ ಹಾಗೂ ಇನ್ನಿತರ ಪ್ರಾಧ್ಯಾಪಕರು ಉತ್ತರಿಸಿದರು.

ಇದಲ್ಲದೇ ಮೈಸೂರು ವಿವಿ ವಿದ್ಯಾರ್ಥಿಗಳು ಬಾಂಗ್ಲಾ ದೇಶದ ವಿಚಾರಗಳ ಬಗ್ಗೆ ಪ್ರಶ್ನಿಸಿ ತಿಳಿದುಕೊಂಡರು. ಎನ್ ಎಸ್ ಎಸ್ ಪ್ರಾದೇಶಿಕ ನಿರ್ದೇಶಕರು ಕೆ.ವಿ. ಖಾದ್ರಿ ನರಸಿಂಹಯ್ಯ, ರಾಜ್ಯ NSS ಅಧಿಕಾರಿ ಪ್ರತಾಪ್ ಲಿಂಗಯ್ಯ, ಸಂಯೋಜಕರಾದ ಪ್ರೊ.ಬಿ.ಚಂದ್ರಶೇಖರ, ಅಂತರಾಷ್ಟ್ರೀಯ ಕೇಂದ್ರ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ಜಿ.ಆರ್.ಜನಾರ್ದನ, ಪ್ರೊ.ಸಿ.ಗುರುಸಿದ್ದಯ್ಯ, ಬಾಂಗ್ಲಾದೇಶದ ತಂಡದ ನವಶಾದ್, ನೀರಜ್, ಡಾ. ಸುಭಾಷ್, ದೇವರಾಜ್ ಚಕ್ರಪಾಣಿ ಸೇರಿದಂತೆ ಇತರರು ಭಾಗವಹಿಸಿದ್ದರು.