ಮನೆ ರಾಜಕೀಯ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

0

ಬೆಂಗಳೂರು (Bengaluru)- ಹೈಕಮಾಂಡ್‌ ಭೇಟಿ ಮಾಡಿ ಸಂಪುಟ ವಿಸ್ತರಣೆ/ ಪುನಾರಚನೆ ಬಗ್ಗೆ ಚರ್ಚೆ ನಡೆಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರೀಕ್ಷೆ ಹುಸಿಯಾಗಿದೆ. ಈ ಮೂಲಕ ಸಂಪುಟ ಸರ್ಜರಿ ಮತ್ತಷ್ಟು ಕಗ್ಗಂಟಾಗಿದ್ದು, ಹೈಕಮಾಂಡ್‌ ನಡೆ ಕುತೂಹಲ ಮೂಡಿಸಿದೆ.

 ‘ಇನ್ವೆಸ್ಟ್‌ ಕರ್ನಾಟಕ’ ಸಂಬಂಧ ವಿವಿಧ ದೇಶಗಳ ರಾಯಭಾರಿ ಹಾಗೂ ಹೈ ಕಮಿಷನರ್ ಗಳನ್ನು ಭೇಟಿಗೆ ಮಂಗಳವಾರ ದೆಹಲಿಗೆ ತೆರಳಿದ್ದ ಬೊಮ್ಮಾಯಿ, ಹೈಕಮಾಂಡ್‌ ಭೇಟಿ ಮಾಡಿ ಸಂಪುಟ ವಿಸ್ತರಣೆ ಚರ್ಚೆ ನಡೆಸುವ ಉದ್ದೇಶ ಹೊಂದಿದ್ದರು. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ.

ಮಂಗಳವಾರ ನಿಗದಿತ ಕಾರ್ಯಕ್ರಮ ಮುಗಿಸಿ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಜೊತೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತಾಗಿ ಚರ್ಚೆ ಮಾಡುವುದು ಸಿಎಂ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಸಿಎಂ ದೆಹಲಿ ಪ್ರವಾಸ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

ಸಂಪುಟಕ್ಕೆ ಸೇರ್ಪಡೆಯಾಗಲು ಪ್ರಯತ್ನ ನಡೆಸುತ್ತಿರುವ ಆಕಾಂಕ್ಷಿಗಳಲ್ಲೂ ನಿರೀಕ್ಷೆ ಗರಿಗೆದರಿತ್ತು. ಆದರೆ, ವರಿಷ್ಠರ ಭೇಟಿ ಸಾಧ್ಯವಾಗದ ಕಾರಣದಿಂದ ಸಂಪುಟ ಸರ್ಜರಿಯ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿಯವರು, ನವೆಂಬರ್ 2, 3, 4ರಂದು ಬಂಡವಾಳ ಹೂಡಿಕೆದಾರರ ಸಮಾವೇಶ ಇದೆ. ಈ ಹಿನ್ನೆಲೆಯಲ್ಲಿ ನವದೆಹಲಿಗೆ ಬಂದಿದ್ದೇನೆ. ವಿದೇಶಗಳ ರಾಯಭಾರಿಗಳನ್ನು ಭೇಟಿಯಾಗಿ ಆಹ್ವಾನ ನೀಡಿದ್ದೇವೆ. ಕೈಗಾರಿಕಾ ಇಲಾಖೆ ಸಚಿವರ ಒತ್ತಾಸೆಯಂತೆ ದೆಹಲಿಗೆ ಬಂದಿದ್ದೇವೆ. ನಮ್ಮ ನಾಯಕರಾದ ಅಮಿತ್ ಶಾ, ಜೆ.ಪಿ.ನಡ್ಡಾ ದೆಹಲಿಯಲ್ಲಿ ಇಲ್ಲ. ಹಾಗಾಗಿ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದರು.

ಈ ನಡುವೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು, ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆಂದು ತಿಳಿಸಿದರು. ದೆಹಲಿ ಭೇಟಿ ವೇಳೆ ಬೊಮ್ಮಾಯಿಯವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಸಭೆ ನಡೆಸಿ, ವಿವಿಧ ಆರೋಗ್ಯ ಯೋಜನೆಗಳ ಕುರಿತು ಚರ್ಚೆ ನಡೆಸಿದರು.

ಏತನ್ಮಧ್ಯೆ, ಪ್ರಮುಖ ಬೆಳವಣಿಗೆಯೊಂದರಲ್ಲಿ ಬುಧವಾರ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.