ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಕುರಿತು ರಾಜ್ಯ ರಾಜಕಾರಣದಲ್ಲಿ ಮತ್ತೆ ಊಹಾಪೋಹಗಳು ಶುರುವಾಗಿದೆ. ಆದರೆ ಈ ಕುರಿತಂತೆ ಸ್ಪಷ್ಟನೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, “ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆ ಪಕ್ಷದ ಹೈಕಮಾಂಡ್‌ಗೆ ಸೇರಿದೆ. ಅದರೆ ಕುರಿತು ಅವರೇ ಮಾತನಾಡುತ್ತಿಲ್ಲವಾದರೆ ನಾವು ಮತ್ತು ನೀವು ಚರ್ಚೆ ನಡೆಸುವುದರಲ್ಲಿ ಅರ್ಥವಿಲ್ಲ” ಎಂದು ಘಾಟಾಗಿ ಪ್ರತಿಕ್ರಿಯಿಸಿದ್ದಾರೆ.
ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಯಾರ ಜತೆಗೂ ಈ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ. ಸಿಎಂ ಬದಲಾಯಿಸುವ ಅಧಿಕಾರ ಇರುವ ನಾಯಕರೇ ಮೌನವಿರುವಾಗ ಈ ಬಗ್ಗೆ ಚರ್ಚೆ ನಡೆಸುವುದು ಅಪಪ್ರಸ್ತುತ,” ಎಂದು ಅಭಿಪ್ರಾಯಪಟ್ಟರು.
ಸುರ್ಜೇವಾಲಾ ಸಭೆಯಲ್ಲಿ ಸಿಎಂ ಬದಲಾವಣೆಯ ಚರ್ಚೆ ಇಲ್ಲ
ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ನಡೆದ ಶಾಸಕರ ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಭಾಗವಹಿಸಿದ್ದರು. ಆದರೆ, ಆ ಸಭೆಯಲ್ಲಿ ಯಾವುದೇ ರೀತಿಯ ಮುಖ್ಯಮಂತ್ರಿ ಬದಲಾವಣೆ ಅಥವಾ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತು ಚರ್ಚೆಯೇ ನಡೆದಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಅವರು ಸಭೆಯಲ್ಲಿ ಶಾಸಕರಿಗೆ, “ಸರ್ಕಾರದ ಯೋಜನೆಗಳು ಜನತೆಗೇ ತಲುಪಬೇಕೆಂಬ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳನ್ನು ವೃದ್ಧಿಸಬೇಕು” ಎಂದು ಸಲಹೆ ನೀಡಿದ್ದರೆಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ದೆಹಲಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಭೇಟಿ ಸಾಧ್ಯವಾಗಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಹೋಗುವ ಕುರಿತು ಚರ್ಚೆಗಳು ನಡೆದಿದ್ದರೂ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಬಿಹಾರ ಪ್ರವಾಸದಲ್ಲಿದ್ದ ಕಾರಣ, ಅವರಿಗೆ ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು. “ಈ ಸಂದರ್ಭವನ್ನು ಆಧರಿಸಿ, ರಾಜ್ಯದ ನಾಯಕರನ್ನು ದುರ್ಬಲ ಎನ್ನುದು ಸೂಕ್ತವಲ್ಲ. ನಾವು ಜನಪರ ಆಡಳಿತ ನೀಡಲು ಬದ್ಧರಾಗಿದ್ದೇವೆ. ಸಿಎಂ ಬದಲಾವಣೆ ಎನ್ನುವುದು ಮಾಧ್ಯಮ ಮತ್ತು ಕೆಲವು ರಾಜಕೀಯ ವಲಯಗಳಲ್ಲಿ ನಡೆಯುವ ಊಹಾಪೋಹ ಮಾತ್ರ” ಎಂದು ಅವರು ಸ್ಪಷ್ಟಪಡಿಸಿದರು.
ಪಕ್ಷದ ಭಿನ್ನಮತ ಹಾಗೂ ಸ್ಥಿರತೆಯ ಪ್ರಶ್ನೆಗಳಿಗೆ ಉತ್ತರ
ಇತ್ತೀಚೆಗೆ ಪಕ್ಷದೊಳಗೆ ಕೆಲವು ಅಸಮಾಧಾನಗಳು ಉದ್ಭವಿಸಿದ್ದರೂ, ಸರ್ಕಾರ ಸ್ಥಿರವಾಗಿದ್ದು ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂಬುದಾಗಿ ಖರ್ಗೆ ಅವರ ಮಾತುಗಳಿಂದ ಗೊತ್ತಾಗುತ್ತದೆ. “ಪಕ್ಷದ ಒಳಾಂಗಣದಲ್ಲಿ ಅಂತಹ ಚರ್ಚೆಗಳಿಲ್ಲ. ಪಕ್ಷದ ಹೈಕಮಾಂಡ್‌ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಯಾವ ನಿರ್ಧಾರವಾದರೂ ಅವರು ತೆಗೆದುಕೊಳ್ಳುತ್ತಾರೆ,” ಎಂದು ಅವರು ಹೇಳಿದರು.














