ರಾಯಚೂರು: ಸೂರ್ಯ ಚಂದ್ರರ ಸಾಕ್ಷಿಯಾಗಿ ಹೇಳುತ್ತೇನೆ. ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಬಿ.ನಾಗೇಂದ್ರ ಹೇಳಿದರು.
ಮಂತ್ರಾಲಯದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಂಸದ ಅನಂತ ಕುಮಾರ್ ಹೆಗಡೆ ಒಬ್ಬ ಮೂರ್ಖ. ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಸಂಸದನನ್ನು ಆ ಕ್ಷೇತ್ರ ಜನ ಹೇಗೆ ಗೆಲ್ಲಿಸಿದ್ದಾರೋ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.
ಸಂವಿಧಾನ ಇದ್ದುದ್ದಕ್ಕೆ ನಾನು ಶಾಸಕ ಮಂತ್ರಿಯಾಗಿದ್ದೇನೆ. ಪ್ರಧಾನಿ ಮೋದಿ ಅವರು ಸಹ ಸಂವಿಧಾನದಿಂದಲೇ ನಾನು ಪ್ರಧಾನಿಯಾಗಿದ್ದೇನೆ ಎಂದು ಹೇಳುತ್ತಾರೆ. ಆದರೆ, ಅವರ ಪಕ್ಷದ ಸಂಸದ ಗೆದ್ದು ಬಂದ ಕೂಡಲೇ ಸಂವಿಧಾನ ಬದಲಿಸುತ್ತೇವೆ ಎನ್ನುತ್ತಾರೆ. ಸಂವಿಧಾನವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಮೂರ್ಖರು ಎಷ್ಟು ಹೇಳಿದರು ಬದಲಾಗಲ್ಲ ಎಂದರು.
ಸಂವಿಧಾನ ಬದಲಾದರೆ ರಕ್ತಪಾತವಾಗುತ್ತದೆ ಎನ್ನುವ ಸಿಎಂ ಸಿದ್ದರಾಮಯ್ಯ ನೂರಕ್ಕೆ ನೂರರಷ್ಟು ಸತ್ಯ. ಸಂವಿಧಾನ ಬಿಟ್ಟು ನಡೆದುಕೊಳ್ಳುವುದಾದರೆ ನಮಗೆ ವಾಕ್ ಸ್ವಾತಂತ್ರ್ಯವೂ ಇರಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಪಕ್ಷದ ಕಟ್ಟಕಡೆಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲ್ಲುವಂತಹ ವಾತಾವರಣವಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಎದುರಾಳಿ ಯಾರೇ ನಿಂತರೂ ನಮಗೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.