ಮನೆ ರಾಜಕೀಯ ಯಾರನ್ನೂ ಗುರಿ ಮಾಡುತ್ತಿಲ್ಲ, ಹಳೆಯ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ: ಗೃಹ ಸಚಿವ ಜಿ ಪರಮೇಶ್ವರ್

ಯಾರನ್ನೂ ಗುರಿ ಮಾಡುತ್ತಿಲ್ಲ, ಹಳೆಯ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ: ಗೃಹ ಸಚಿವ ಜಿ ಪರಮೇಶ್ವರ್

0

ಬೆಂಗಳೂರು: ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದ್ದು, ಹುಬ್ಬಳ್ಳಿಯಲ್ಲಿ ಕರಸೇವಕನನ್ನು ಬಂಧಿಸಿರುವುದು ಆ ಪ್ರಕ್ರಿಯೆಯ ಭಾಗವಾಗಿದೆ. ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ನಡೆದಿರುವುದು ಕೇವಲ ಕಾಕತಾಳೀಯವಾಗಿದೆ ಎಂದು ರಾಜ್ಯ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ಕರಸೇವಕ ಪ್ರಕರಣವನ್ನೇ ಕೈಗೆತ್ತಿಕೊಂಡಿದ್ದರೆ ಬಿಜೆಪಿಯವರು ಸರ್ಕಾರವನ್ನು ದೂಷಿಸಬಹುದಿತ್ತು. ಆದರೆಸ ಇತರ ಹಳೆಯ ಪ್ರಕರಣಗಳೂ ಪರಿಶೀಲನೆಗೆ ಬಂದಿವೆ. ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಬಿಜೆಪಿಯವರು ಸರ್ಕಾರ ನಡೆಸಿದ್ದಾರೆ ಹಾಗೂ ಬಿಎಸ್ ಯಡಿಯೂರಪ್ಪನವರೂ ಸರ್ಕಾರ ನಡೆಸಿದ್ದಾರೆ. ಕೇವಲ ಇದೊಂದೇ ಪ್ರಕರಣ ಅಲ್ಲ, ಎಲ್ಲ ಕೇಸ್ ಗಳನ್ನೂ ರಿವ್ಯೂ ಮಾಡುವ ಸಂದರ್ಭದಲ್ಲಿ ಈ ಪ್ರಕರಣದ ಬಗ್ಗೆಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬಿಜೆಪಿ ನಾಯಕರು ವಿನಾ ಕಾರಣ ರಾಜಕೀಯ ಉದ್ದೇಶದಿಂದ ಟೀಕೆ ಮಾಡಬಾರದು. ಪೊಲೀಸರು ಈ ನೆಲದ ಕಾನೂನಿನ ಪ್ರಕಾರ ನಡೆದುಕೊಂಡಿದ್ದಾರೆ. ಹಾಗಾದರೆ, ಬಾಕಿ ಉಳಿದ ಪ್ರಕರಣಗಳಲ್ಲಿ ಬಂಧನಕ್ಕೊಳಗಾದವರು ಹಿಂದೂಗಳಲ್ಲವೇ? ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯವಾ? ಎಂದು ಪ್ರಶ್ನಿಸಿದರು.

ಕಾನೂನು ಪ್ರಕಾರ ಏನು ಆಗುತ್ತದೆಯೋ ಆಗುತ್ತದೆ. ಇದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಹಳೆಯ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದೇವೆ. ಈ ಕಡೆಯಾದರೂ ನ್ಯಾಯ ಆಗಬೇಕು ಅಥವಾ ಆ ಕಡೆಯಾದರೂ ಆಗಬೇಕು. 30 ವರ್ಷಗಳ ಹಿಂದಿನ ಪ್ರಕರಣಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಬಂಧನ ಆಗಿದ್ದು, ಕಾಕತಾಳೀಯ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

ಈ ವಿಚಾರವಾಗಿ ಹುಬ್ಬಳ್ಳಿ ನಗರ ಪೊಲೀಸ್ ಕಮಿಷನರ್ ನಮ್ಮ ಗಮನಕ್ಕೆ ತಂದು ಬಂಧನ ಮಾಡಿಲ್ಲ. ನಮ್ಮ ಪೊಲೀಸರಿಗೆ ಕಾನೂನು ಪುಸ್ತಕ ಕೊಟ್ಟಿಲ್ವಾ? ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಇದೇ ವೇಳೆ ಸಿಬಿಐ ಪ್ರಕರಣಗಳಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಜ್ಯ ಸಚಿವ ಸಂಪುಟ ರಿಲೀಫ್ ನೀಡಿರುವ ಕುರಿತು ಮಾತನಾಡಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೌಖಿಕವಾಗಿ ಪ್ರಕರಣವನ್ನು ಸಿಬಿಐಗೆ ನೀಡಿದ್ದರಿಂದ ಸಂಪುಟ ಸಭೆ ಈ ನಿರ್ಧಾರ ಕೈಗೊಂಡಿದೆ. ಈ ಪ್ರಕರಣ ಸಿಬಿಐ ಮತ್ತು ಲೋಕಾಯುಕ್ತರ ನಡುವೆ ಇದೆ. ಇದು ನಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.

ಕನ್ನಡ ಹೋರಾಟಗಾರರು ಮತ್ತು ರೈತರ ಮೇಲಿನ ಪ್ರಕರಣಗಳನ್ನು ಕೈಬಿಡುವಂತೆ ಹಲವರು ಮನವಿ ಮಾಡಿದ್ದಾರೆ. ಆದರೆ, ನಾವು ಸ್ವಯಂ ಪ್ರೇರಿತವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಇದನ್ನು ಕಾನೂನಿನ ಮೂಲಕ ಮಾಡಬೇಕು. ನಾವು ನಮ್ಮ ಅಧಿಕಾರಿಗಳು ನೀಡಿದ ಶಿಫಾರಸುಗಳನ್ನು ಪರಿಶೀಲಿಸಲು ಸಂಪುಟ ಉಪಸಮಿತಿಯನ್ನು ರಚಿಸಿದ್ದೇವೆ. ಆರೋಪಿಗಳು ನಿರಪರಾಧಿಗಳು ಎಂದು ಕಂಡುಬಂದರೆ, ಬಿಡುಗಡೆ ಮಾಡಲಾಗುವುದು ಎಂದರು.